ADVERTISEMENT

ಕಲಬುರಗಿ: 3 ತಿಂಗಳಲ್ಲಿ 71 ಬಾಲ್ಯವಿವಾಹಕ್ಕೆ ತಡೆ

ಶಿಕ್ಷೆಯ ಭಯವಿದ್ದರೂ ಬಾಲ್ಯವಿವಾಹ ಯತ್ನಗಳಿಗೆ ಜಿಲ್ಲೆಯಲ್ಲಿ ಬೀಳದ ಕಡಿವಾಣ

ಬಸೀರ ಅಹ್ಮದ್ ನಗಾರಿ
Published 7 ಜುಲೈ 2025, 5:09 IST
Last Updated 7 ಜುಲೈ 2025, 5:09 IST
<div class="paragraphs"><p>ಬಾಲ್ಯ ವಿವಾಹ</p></div>

ಬಾಲ್ಯ ವಿವಾಹ

   
ಜಿಲ್ಲೆಯಲ್ಲಿ ಬದಲಾಗದ ಮನಸ್ಥಿತಿ | ನಗರದಲ್ಲೂ ಬಾಲ್ಯವಿವಾಹಕ್ಕೆ ಯತ್ನ | ಮಕ್ಕಳ ರಕ್ಷಣಾ ಸಮಿತಿಯಿಂದ ನಿರಂತರ ಜಾಗೃತಿ

ಕಲಬುರಗಿ: ಅದು 2024ರ ನವೆಂಬರ್‌ 25ರ ಮಧ್ಯಾಹ್ನದ ಹೊತ್ತು. ಕಲ್ಯಾಣ ಮಂಟಪದಲ್ಲಿ ಮದುವೆ ಸಡಗರ. ಬಂದ ಅತಿಥಿಗಳು ಅಕ್ಷತೆ ಹಾಕಿ, ಮದುವೆಯೂಟ ಮಾಡುತ್ತಿದ್ದರು. ವಧು–ವರರು ಮುಗುಳ್ನಕ್ಕು ಆಶೀರ್ವಾದ ಪಡೆಯುತ್ತಿದ್ದರು. ಏಕಾಏಕಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿಗಳು ದಾಳಿ ಮಾಡಿದರು. ಅಷ್ಟೊತ್ತಿಗೆ ವಧು–ವರರು ಅಲ್ಲಿಂದ ಕಾಲ್ಕಿತ್ತರು... ಕಾರಣ ಅದೊಂದು ಬಾಲ್ಯವಿವಾಹ!

ಇಂಥ ಬಾಲ್ಯವಿವಾಹ ನಡೆದಿದ್ದು ಯಾವುದೋ ಕುಗ್ರಾಮದಲ್ಲಿ ಅಲ್ಲ; ಬದಲಿಗೆ ಕಲಬುರಗಿ ನಗರದಲ್ಲೇ ಈ ಮದುವೆ ನಡೆದಿತ್ತು. ಮದುವೆಯಲ್ಲಿ ಬರೀ ನೆಂಟರಿಷ್ಟರೇ ಅಲ್ಲ, ಬಾಲಕಿ ಓದುತ್ತಿದ್ದ ಶಾಲೆಯ ಸಿಬ್ಬಂದಿಯೂ ಪಾಲ್ಗೊಂಡಿದ್ದರು!

ADVERTISEMENT

ಬಳಿಕ ಈ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಬಾಲಕಿ ಓದುತ್ತಿದ್ದ ಶಾಲೆಯ ಮುಖ್ಯಶಿಕ್ಷಕ, ಬಾಲಕಿ ನೆಲೆಸಿದ್ದ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನ ವಾರ್ಡನ್‌, ಮದುವೆ ಮಾಡಿದ ಪುರೋಹಿತ, ಕಲ್ಯಾಣ ಮಂಟಪದ ಮಾಲೀಕ, ಮದುವೆ ಆಹ್ವಾನ ಪತ್ರಿಕೆ ಮುದ್ರಿಸಿದ ಪ್ರಿಂಟಿಂಗ್‌ ಪ್ರೆಸ್‌, ಮದುವೆಯಲ್ಲಿ ಅಡುಗೆ ಮಾಡಿದ ಸಿಬ್ಬಂದಿ, ಬಾಲಕಿಯ ಪೋಷಕರು, ವರ ಹಾಗೂ ಆತನ ಪೋಷಕರು ಸೇರಿ ಬರೋಬ್ಬರಿ 40 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು!

ಇಷ್ಟಾದರೂ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಈ ಪ್ರಕರಣ ಪಾಠವಾಗಿಲ್ಲ. ಬಾಲವಿವಾಹ ಮಾಡುವ ಪ್ರವೃತ್ತಿಗೂ ಕಡಿವಾಣ ಬಿದ್ದಿಲ್ಲ. ಜಿಲ್ಲೆಯಲ್ಲಿ ಮತ್ತೆ ಮತ್ತೆ ಬಾಲ್ಯವಿವಾಹ ಯತ್ನಗಳು ನಡೆಯುತ್ತಲೇ ಇವೆ. ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅವುಗಳನ್ನು ತಡೆಯುತ್ತಲೇ ಇದೆ.

ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬುವುದಕ್ಕೂ ಮುನ್ನವೇ ಮದುವೆ ಮಾಡಲು ಮುಂದಾಗಿದ್ದ ಪಾಲಕರ ಪ್ರಯತ್ನವನ್ನು ವಿಫಲಗೊಳಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯು, ಕಳೆದ ಮೂರು ವರ್ಷಗಳಲ್ಲಿ 447 ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರೇ ತಿಂಗಳಲ್ಲಿ 71 ಬಾಲವಿವಾಹಗಳನ್ನು ತಡೆದಿರುವುದು ವಿಶೇಷ.

2022ರ ಏಪ್ರಿಲ್‌ನಿಂದ 2025ರ ಜೂನ್‌ ಅಂತ್ಯದವರೆಗೆ ಮಕ್ಕಳ ಸಹಾಯವಾಣಿಗೆ ಬಂದ ದೂರುಗಳ ಆಧಾರದ ಮೇರೆಗೆ ಮಕ್ಕಳ ರಕ್ಷಣಾ ಘಟಕವು ಕಾರ್ಯಪ್ರವೃತ್ತವಾಗಿ ಈ ಕ್ರಮ ಕೈಗೊಂಡಿದೆ. ಅಲ್ಲದೆ, ಈ ಪ್ರಯತ್ನವನ್ನು ಮೀರಿ ಜಿಲ್ಲೆಯ ವಿವಿಧೆಡೆ 33 ಬಾಲ್ಯವಿವಾಹಗಳು ನಡೆದಿವೆ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಪ್ರಕರಣಗಳನ್ನು ದಾಖಲಿಸಲಾಗಿದೆ. 

ಜಿಲ್ಲೆಯ ವಿವಿಧೆಡೆ 207 ಪ್ರಕರಣಗಳಲ್ಲಿ ಹುಡುಗಿಗೆ 18 ವರ್ಷ ತುಂಬುವ ಮೊದಲು ವಿವಾಹ ಮಾಡಿದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 6 ಪ್ರಕರಣಗಳಲ್ಲಿ ಹುಡುಗರಿಗೆ 21 ವರ್ಷ ತುಂಬುವ ಮುನ್ನ ಮದುವೆ ಮಾಡಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ಜೇವರ್ಗಿಯಲ್ಲಿ ಜಾಸ್ತಿ ಪ್ರಕರಣ

ಕಲಬುರಗಿ ಜಿಲ್ಲೆಯಲ್ಲಿ ನಡೆಯುವ ಬಾಲ್ಯವಿವಾಹ ಯತ್ನ ಪ್ರಕರಣಗಳಲ್ಲಿ ಜೇರ್ವಗಿ ತಾಲ್ಲೂಕು ಅಗ್ರಸ್ಥಾನದಲ್ಲಿದೆ. 2022ರ ಏಪ್ರಿಲ್‌ನಿಂದ 2025ರ ಜೂನ್‌ ತನಕ ಜೇವರ್ಗಿ ತಾಲ್ಲೂಕಿನಲ್ಲಿ ಒಟ್ಟು 87 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಇದೇ ಅವಧಿಯಲ್ಲಿ ಚಿಂಚೋಳಿ ತಾಲ್ಲೂಕಿನಲ್ಲಿ 53 ಬಾಲ್ಯವಿವಾಹಗಳನ್ನು ತಡೆಯಲಾಗಿದೆ.

ಬಾಲ್ಯವಿವಾಹಕ್ಕೆ ಕಾರಣಗಳೇನು?

‘ಬಾಲ್ಯವಿವಾಹದ ಬಗೆಗೆ ಜನರಲ್ಲಿ ಜಾಗೃತಿಯ ಕೊರತೆಯಿಲ್ಲ. ಆದರೆ ಹುಡುಗ–ಹುಡುಗಿ ಪ್ರೇಮದಲ್ಲಿ ಸಿಲುಕುವುದು ಸದ್ಯದ ಬಾಲ್ಯವಿವಾಹಗಳಿಗೆ ಮುಂಚೂಣಿ ಕಾರಣವಾಗಿದೆ. ಇದರೊಂದಿಗೆ ಬಡತನ ಓದು ಅರ್ಧಕ್ಕೆ ನಿಲ್ಲಿಸುವುದು ಸಂಬಂಧಿಗಳಲ್ಲೇ ಮದುವೆ ಮಾಡುವುದು ಏಕಪೋಷಕ ಮಕ್ಕಳು ಸೇರಿದಂತೆ ಹಲವು ಕಾರಣಗಳು ಬಾಲ್ಯವಿವಾಹ ಯತ್ನಗಳ ಹಿಂದಿವೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಂಜುಳಾ ಪಾಟೀಲ. ‘ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಬೇಡಿ. ಅವರಿಗೆ ಶಿಕ್ಷಣ ಕೊಡಿಸಿದರೆ ಅವರ ಜೀವನಮಟ್ಟ ಖಂಡಿತವಾಗಿಯೂ ಉತ್ತಮಗೊಳ್ಳಬಲ್ಲದು. ಬಾಲ್ಯದಲ್ಲಿ ಮದುವೆಯಾದರೆ ಅದನ್ನು ಮಾನಸಿಕವಾಗಿ ದೈಹಿಕವಾಗಿ ನಿಭಾಯಿಸುವ ಶಕ್ತಿ ಅವರಿಗೆ ಇರಲ್ಲ. ಜೊತೆಗೆ ಬಾಲ್ಯ ವಿವಾಹ ಅಪರಾಧಕ್ಕೆ ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ ₹1 ಲಕ್ಷದವರೆಗೆ ದಂಡ ವಿಧಿಸಬಹುದು. ಬಾಲ್ಯವಿವಾಹ ನಡೆಯುವುದು ಕಂಡುಬಂದರೆ ಕೂಡಲೇ ಮಕ್ಕಳ ಸಹಾಯವಾಣಿ 1098 ಅಥವಾ 112ಕ್ಕೆ ಕರೆ ಮಾಡಬೇಕು’ ಎನ್ನುತ್ತಾರೆ ಅವರು.

‘ಶೇ70ರಷ್ಟು ವಿವಾಹ ಕರೆಗಳು...’:

‘2030ರ ವೇಳೆಗೆ ದೇಶವನ್ನು ‘ಬಾಲ್ಯವಿವಾಹ ಮುಕ್ತ’ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಬಾಲ್ಯವಿವಾಹ ತಡೆಯುವಂತೆ ಕಟ್ಟುನಿಟ್ಟಾಗಿ ಸೂಚಿಸಿದೆ. ಜೊತೆಗೆ ಕಳೆದೆರಡು ವರ್ಷಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮಿಷನ್‌ ಸುರಕ್ಷಾ ಯೋಜನೆ ಅಡಿಯಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಹೀಗಾಗಿ ಮಕ್ಕಳ ಸಹಾಯವಾಣಿ ‘1098’ಗೆ ಹೆಚ್ಚು ದೂರುಗಳು ಬರುತ್ತಿವೆ. ಈ ಸಹಾಯವಾಣಿಗೆ ಬರುವ ಕರೆಗಳ ಪೈಕಿ ಶೇ 70ರಷ್ಟು ಬಾಲ್ಯವಿವಾಹಕ್ಕೆ ಸಂಬಂಧಿಸಿದವೇ ಆಗಿರುತ್ತವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.