ADVERTISEMENT

ಚಿಂಚೋಳಿ: ಕಾಗಿಣಾ ನದಿಯಲ್ಲಿ ತೇಲಿಹೋದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 12:23 IST
Last Updated 18 ಜುಲೈ 2021, 12:23 IST
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋತಂಗಲ್‌ ಬಳಿ ಕಾಗಿಣಾ ನದಿಯಲ್ಲಿ ತೇಲಿಹೋದ ವ್ಯಕ್ತಿಗಾಗಿ ಭಾನುವಾರವೂ ಹುಡುಕಾಟ ನಡೆದಿದೆ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋತಂಗಲ್‌ ಬಳಿ ಕಾಗಿಣಾ ನದಿಯಲ್ಲಿ ತೇಲಿಹೋದ ವ್ಯಕ್ತಿಗಾಗಿ ಭಾನುವಾರವೂ ಹುಡುಕಾಟ ನಡೆದಿದೆ   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಪೋತಂಗಲ್‌ ಗ್ರಾಮದಲ್ಲಿ ಶನಿವಾರ ಸಂಜೆ ಕಾಗಿಣಾ ನದಿಯಲ್ಲಿ ವ್ಯಕ್ತಿಯೊಬ್ಬರು ತೇಲಿ ಹೋಗಿದ್ದಾರೆ.

ಪ್ರಹ್ಲಾದ್‌ ದಶರಥ ದೋಡ್ಲಾ

ಪೋತಂಗಲ್‌ ನಿವಾಸಿ ಪ್ರಹ್ಲಾದ್‌ ದಶರಥ ದೋಡ್ಲಾ (30) ನೀರುಪಾಲಾದವರು. ಹಳ್ಳದ ಆಚೆಗೆ ಇರುವ ತೆಲಂಗಾಣ ರಾಜ್ಯದ ಖ್ಯಾದಗೇರಾ ಹೊರವಲಯದಲ್ಲಿ ಸೇಂದಿ (ಟಾಡಿ) ಮಾರಾಟವಾಗುತ್ತದೆ. ಬೆಳಿಗ್ಗೆ ನದಿಯಲ್ಲೇ ನಡೆದುಕೊಂಡು ಹೋಗಿದ್ದ ಇವರು ಸೇಂದಿ ಕುಡಿದು, ಮರಳಿ ಬರುವಾಗ ನೀರಿನ ಸೆಳೆತಕ್ಕೆ ಸಿಲುಕಿದರು. ನದಿ ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯೊಬ್ಬರು ಪ್ರಹ್ಲಾದ್‌ ತೇಲಿಹೋಗುವುದನ್ನು ನೋಡಿದ್ದು, ಊರಿನವರಿಗೆ ಮಾಹಿತಿ ನೀಡಿದರು.

‌ಈಜುಗಾರರು, ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ವ್ಯಕ್ತಿ ಹುಡುಕಾಟ ಮುಂದುವರಿದಿದೆ.

ADVERTISEMENT

‌ತೆಲಂಗಾಣದಲ್ಲಿ ಸೇಂದಿ ಮಾರಾಟಕ್ಕೆ ಅನುಮತಿ ಇದೆ. ಹೀಗಾಗಿ, ನದಿ ಆಚೆಗೆ ಇರುವ ತೆಲಂಗಾಣಕ್ಕೆ ಹೋಗಿ ಸೇಂದಿ ಕುಡಿದು ಬರುವುದು ನಿರಂತರವಾಗಿ ನಡೆದೇ ಇದೆ. ಹೀಗೆ ಸೇಂದಿ ಕುಡಿದು ಬರುವಾಗ ವ್ಯಕ್ತಿ ತೇಲಿಹೋಗಿದ್ದಾರೆ ಎಂದು ಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರವಾಹ: 200 ಮನೆಗಳಿಗೆ ನುಗ್ಗಿದ ನೀರು‌‌

ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಭಾನುವಾರ ಕೂಡ ಭಾರಿ‌ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಸಾಲೇಬೀರನಹಳ್ಳಿ, ದೇಗಲಮಡಿ, ತುಮಕುಂಟಾ, ಶಿರೋಳ್ಳಿ, ಕೆರೋಳ್ಳಿ, ಬೆನಕನಳ್ಳಿ, ಮೊದಲಾದ ಗ್ರಾಮಗಳಲ್ಲಿ‌ ಪ್ರವಾಹದ‌ ನೀರು ಮನೆಗಳಿಗೆ ನುಗ್ಗಿದೆ.‌
ಕಾಗಿನಾ ನದಿ ಹಾಗೂ ಹಳ್ಳ–ಕೊಳ್ಳಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದ ಗ್ರಾಮದೊಳಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ನೂರಾರು ಎಕರೆ ಜಮೀನಿನಲ್ಲಿ ನೀರು ನಿಂತಿದ್ದು, ಬೆಳೆ ನಷ್ಟವಾಗಿದೆ.

ಚಿಂಚೋಳಿ ತಾಲ್ಲೂಕು ಬೆನಕನಳ್ಳಿಯಲ್ಲಿ ನುಗ್ಗಿದ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.