ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ಒಂದೇ ದಿನಕ್ಕೆ 5 ಅಡಿಯಷ್ಟು ನೀರು ಹರಿದು ಬಂದಿದ್ದು, ಭರ್ತಿಗೆ 6 ಅಡಿ ಬಾಕಿಯಿದೆ. ಸದ್ಯ ಜಲಾಶಯದ ಮಟ್ಟ 1,612 ಅಡಿ ತಲುಪಿದ್ದು,ಶೇ 82ರಷ್ಟು ಭರ್ತಿಯಾಗಿದೆ.
ಜಲಾಶಯದ ಮೇಲ್ಭಾಗದಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದರಿಂದ 1,468 ಕ್ಯೂಸೆಕ್ ನೀರು ಹರಿದು ಬಂದಿದೆ. ಭಾನುವಾರ ಜಲಾಶಯ ಒಳ ಹರಿವು ತಗ್ಗಿದ್ದು, 340 ಕ್ಯೂಸೆಕ್ ದಾಖಲಾಗಿದೆ. ಚಂದ್ರಂಪಳ್ಳಿ ಜಲಾಶಯ ಭರ್ತಿಯಾಗುತ್ತಿರುವುದಕ್ಕೆ ರೈತರಲ್ಲಿ ಸಂತಸ ಮೂಡಿದೆ.
2,500 ಕ್ಯೂಸೆಕ್ ನೀರು ಹೊರಕ್ಕೆ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2,500 ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ ಎಂದು ಎಇಇ ಅಮೃತ ಪವಾರ್ ಹಾಗೂ ಎಇ ವಿನಾಯಕ ಚವ್ಹಾಣ ತಿಳಿಸಿದ್ದಾರೆ.
10 ಗಂಟೆಗಳಲ್ಲಿ ಜಲಾಶಯಕ್ಕೆ 1,305 ಕ್ಯೂಸೆಕ್ ಒಳ ಹರಿವಿದ್ದು, ಜಲಾಶಯದ ನೀರಿನ ಮಟ್ಟ 489.78 ಮೀ. ಇದೆ. ಹೀಗಾಗಿ ಪ್ರವಾಹ ನಿಯಂತ್ರಣ ಮತ್ತು ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ ಎಂದರು.
ನದಿ ಪಾತ್ರದ ಜನರಿಗೆ ಎಚ್ಚರಿಕೆ
‘ಚಂದ್ರಂಪಳ್ಳಿ ಜಲಾಶಯ ಭರ್ತಿಯತ್ತ ಸಾಗಿದ್ದರಿಂದ ಜಲಾಶಯದ ಸರ್ನಾಲಾ ಮತ್ತು ಮುಲ್ಲಾಮಾರಿ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು’ ಎಂದು ಯೋಜನೆಯ ಎಇಇ ಚೇತನ ಕಳಸ್ಕರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು ‘ಜಲಾಶಯದ ಕೆಳ ಭಾಗದಲ್ಲಿ ಬರುವ ಚಂದ್ರಂಪಳ್ಳಿ ಫತೆಪುರ ಐನೋಳ್ಳಿ ಚಿಂಚೋಳಿ ಚಂದಾಪುರ ಸೇರಿದಂತೆ ಮುಲ್ಲಾಮಾರಿ ನದಿ ಪಾತ್ರದ ಜನರು ಸರ್ನಾಲಾ ಮತ್ತು ಮುಲ್ಲಾಮಾರಿ ನದಿಯಲ್ಲಿ ಇಳಿಯಬಾರದು’. ‘ದನ ಕರುಗಳಿಗೆ ಮೈತೊಳೆಯಲು ನೀರು ಕುಡಿಸಲು ಮತ್ತು ಹೊಲಗಳಿಗೆ ತೆರಳಲು ನದಿ ದಾಟುವುದು ಮತ್ತು ಮಹಿಳೆಯರು ಬಟ್ಟೆ ತೊಳೆಯಲು ನದಿಗೆ ಹೋಗುವುದನ್ನು ತಪ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.