
ಚಿಂಚೋಳಿ: ಕಳೆದ 20 ದಿನಗಳಿಂದ ತಾಲ್ಲೂಕಿನ ಚಿಮ್ಮಈದಲಾಯಿ ಗ್ರಾಮದಲ್ಲಿ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಾಟದಲ್ಲಿ ಚಿಮ್ಮಾಈದಲಾಯಿ ಆತಿಥೇಯ ತಂಡ ಚಿಮ್ಮನಚೋಡ ತಂಡಕ್ಕೆ ಶರಣಾಯಿತು.
ಟಾಸ್ ಗೆದ್ದ ಚಿಮ್ಮಾಈದಲಾಯಿ ತಂಡ ಫಿಲ್ಡಿಂಗ್ ಆಯ್ದುಕೊಂಡರೆ, ಮೊದಲು ಬ್ಯಾಟಿಂಗ್ ಮಾಡಿದ ಚಿಮ್ಮನಚೋಡ ತಂಡ 10 ಓವರಗಳಲ್ಲಿ 6 ವಿಕೆಟ್ ಕಳೆದುಕೊಂಡು 89 ರನ್‌ಗಳ ಗೆಲುವಿನ ಗುರಿ ನೀಡಿತು. ನಂತರ ಬ್ಯಾಂಟಿಂಗ್ ನಡೆಸಿದ ಆತಿಥೇಯ ಚಿಮ್ಮಾಈದಲಾಯಿ ತಂಡ 5 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕುವ ಮೂಲಕ ಚಿಮ್ಮನಚೋಡ ತಂಡದ ಎದುರು ಮಂಡಿಯೂರಿತು.
ಗೆಲುವಿನ ನಗೆ ಬೀರಿದ ಚಿಮ್ಮನಚೋಡ ತಂಡದ ಆಟಗಾರರು, ನಾಯಕ ಅನಿಲ ಕಟ್ಟಿಮನಿ ನೇತೃತ್ವದಲ್ಲಿ ಕ್ರಿಡಾಂಗಣದಲ್ಲಿ ಸ್ಟಂಪ್ ಹಾಗೂ ಬ್ಯಾಟ್ ಮತ್ತು ಕಪ್ ಹಿಡಿದುಕೊಂಡು ನೃತ್ಯ ಮಾಡಿ ಸಂಭ್ರಮಿಸಿದರು. ಟೂರ್ನಿಯಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಸಿದ್ದಾಪುರ ತಾಂಡಾ ತಂಡವನ್ನು ಮಣಿಸಿ ಚಿಮ್ಮನಚೋಡ ತಂಡ ಫೈನಲ್ ಪ್ರವೇಶಿಸಿದರೆ ಆತಿಥೇಯ ತಂಡ ನೇರವಾಗಿ ಫೈನಲ್ ಆಡಿ ಶರಣಾಯಿತು.
ಪ್ರಥಮ ಬಹುಮಾನ ನಗದು ₹30 ಸಾವಿರ ಹಾಗೂ ಕಪ್ ಮತ್ತು ಮೆಡಲ್‌ಗಳನ್ನು ಗ್ರಾ.ಪಂ ಮಾಜಿ ಅಧ್ಯಕ್ಷ ಲಾಲಪ್ಪ ಜ್ಯೋತಿ, ಕಲ್ಯಾಣಿ ಬೆಳಕೇರಿ, ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಚಿಂಚೋಳಿಕರ್ ವಿತರಿಸಿದರು. ಚಿಮ್ಮಾಈದಲಾಯಿ ತಂಡದ ನಾಯಕ ಅಂಬರೀಶ ಕೋಟಪಳ್ಳಿ ಅವರು ರನ್ನರ್ ಅಪ್ ಬಹುಮಾನ ನಗದು ₹20 ಸಾವಿರ ಹಾಗೂ ಕಪ್ ಪಡೆದುಕೊಂಡರು.
ವೀಕ್ಷಕ ವಿವರಣೆಯನ್ನು ಅಖಿಲ ಸಾಬ್, ಜಾಫರ್, ಶಿವಕುಮಾರ ಚಾಮಕೂರ, ಗುಲಾಮ್ ಹಾಫೀಜ್ ನಡೆಸಿಕೊಟ್ಟರು. ವಿಶ್ವಾರಾಧ್ಯ ಸ್ವಾಮಿ 20 ದಿನಗಳ ಕಾಲ ಸ್ಕೋರ್ ದಾಖಲಿಸುವ ಕೆಲಸ ನಡೆಸಿದರು. ಜ.18ರಂದು ಶಾಸಕ ಡಾ.ಅವಿನಾಶ ಜಾಧವ ಟೂರ್ನಿಗೆ ಚಾಲನೆ ನೀಡಿದ್ದರು. ಫೈನಲ್ ಪಂದ್ಯವನ್ನು ಜಿ.ಪಂ ಮಾಜಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ, ಅಲ್ಲಾವುದ್ದಿನ್ ಅನ್ಸಾರಿ, ಶರಣು ಪಪ್ಪಾ, ದಿನೇಶ ದುಗ್ಗಾಣಿ ಮೊದಲಾದವರು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.