ADVERTISEMENT

ಬೆಂಗಳೂರಿನಲ್ಲಿ ‘ಚಿಂಚೋಳಿ ಕದನ’ದ ಚರ್ಚೆ

ಟಿಕೆಟ್‌ಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ತೀವ್ರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 15:22 IST
Last Updated 24 ಏಪ್ರಿಲ್ 2019, 15:22 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಗುಲಬರ್ಗಾ’ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಚಿಂಚೋಳಿ ‘ಉಪ ಚುನಾವಣೆ’ ಕಾವು ರಂಗೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಏ.25ರಂದು ಬೆಂಗಳೂರಿನಲ್ಲಿ ಸಭೆ ಹಮ್ಮಿಕೊಂಡಿವೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ಕೈಲಾಸ ಪಾಟೀಲ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಸಭೆ ಆಯೋಜಿಸಿದ್ದು, ಈ ಸಭೆಯಲ್ಲಿ ಬೀದರ್ ಸಂಸದ ಭಗವಂತ ಖೂಬಾ, ಕಲಬುರ್ಗಿ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ವಿಭಾಗದ ಪ್ರಭಾರಿ, ಸಹ ಪ್ರಭಾರಿಗಳು ಭಾಗವಹಿಸಲಿದ್ದಾರೆ.

ADVERTISEMENT

‘ವರಿಷ್ಠರ ಸೂಚನೆಯಂತೆ ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದಾರೆ. ಟಿಕೆಟ್ ಆಕಾಂಕ್ಷಿ ಸುನಿಲ್ ವಲ್ಲ್ಯಾಪುರೆ ಅವರ ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿದ್ದು, ತಮಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಸ್ಥಳೀಯರಿಗೆ ನೀಡಲು ಆಗ್ರಹ: ‘ಚಿಂಚೋಳಿ ಉಪ ಚುನಾವಣೆಯ ಟಿಕೆಟ್ ಅನ್ನು ಸ್ಥಳೀಯರಿಗೆ ನೀಡಬೇಕು. ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಕ್ಷೇತ್ರದ ಅಭಿವೃದ್ಧಿ ಆಗುವುದಿಲ್ಲ. ಸೋತರೆ ಅವರು ಕ್ಷೇತ್ರದತ್ತ ಮುಖ ಮಾಡುವುದಿಲ್ಲ. ಗೆದ್ದರೆ ಕೈಗೆ ಸಿಗುವುದಿಲ್ಲ. ಆದ್ದರಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಚಿಂಚೋಳಿಯಕಾಂಗ್ರೆಸ್‌ ಮುಖಂಡರು ಜಿಲ್ಲಾ ಕಾಂಗ್ರೆಸ್ ಸಮಿತಿ ಗಮನಕ್ಕೆ ತಂದಿದ್ದಾರೆ’ ಎಂಬುದು ಮೂಲಗಳ ವಿವರಣೆ.

‘ಡಾ.ಉಮೇಶ ಜಾಧವ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದಲೇ ಜಾಧವ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈಗ ಅವರ ಕುಟುಂಬದವರಿಗೆ ಟಿಕೆಟ್ ಕೊಡದಿದ್ದರೆ ಜಾಧವ ಅವರಿಗೆ ಮೋಸ ಮಾಡಿದರು ಎಂಬ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಟ್ಟರೆ ಒಳಿತು’ ಎಂಬ ಮಾತುಗಳು ಚಿಂಚೋಳಿ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.