ADVERTISEMENT

ಕುತೂಹಲ ಕೆರಳಿಸಿದ ಪುರಸಭೆ ಉಪಾಧ್ಯಕ್ಷ ಸ್ಥಾನ

ಚಿಂಚೋಳಿ: ಪಕ್ಷೇತರರೇ ನಿರ್ಣಾಯಕ; ದಾಳ ಉರುಳಿಸುವುದೇ ಬಿಜೆಪಿ?

ಜಗನ್ನಾಥ ಡಿ.ಶೇರಿಕಾರ
Published 6 ನವೆಂಬರ್ 2020, 16:36 IST
Last Updated 6 ನವೆಂಬರ್ 2020, 16:36 IST
ಜಗದೇವಿ ಗಡಂತಿ
ಜಗದೇವಿ ಗಡಂತಿ   

ಚಿಂಚೋಳಿ: ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ (ನ. 7) ಚುನಾವಣೆ ನಿಗದಿಯಾಗಿದೆ. ಬಹುಮತ ಇದ್ದರೂ ಕಾಂಗ್ರೆಸ್ ಪಕ್ಷವನ್ನು ಮೀಸಲಾತಿಯ ಬಾಣ ಪ್ರಯೋಗಿಸಿ ಕಟ್ಟಿಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದರಿಂದ ಅಧ್ಯಕ್ಷ ಸ್ಥಾನ ಸುಲಭವಾಗಿ ಬಿಜೆಪಿಗೆ ಒಲಿಯುವುದು ನಿಶ್ಚಿತವಾಗಿದೆ.

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗಳಿಸಿ ಬಹುಮತ ಹೊಂದಿದೆ. ಇದರಲ್ಲಿ ಒಬ್ಬ ಕೈ ಸದಸ್ಯೆ ಬಿಜೆಪಿ ಪರ ನಿಂತಿದ್ದಾರೆ. ಇವರನ್ನು ಪಕ್ಷ ಹೇಗೆ ಕಟ್ಟಿಹಾಕುತ್ತದೆ. ವಿಪ್ ನೀಡಿದರೆ ಅದನ್ನು ಸದಸ್ಯೆ ಉಲ್ಲಂಘಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಬಿಜೆಪಿ 5 ಸ್ಥಾನ ಹೊಂದಿದ್ದರೆ, ಪಕ್ಷೇತರರು 4 ಮತ್ತು ಜೆಡಿಎಸ್ ಹಾಗೂ ಬಿಎಸ್‌ಪಿ ತಲಾ ಒಂದು ಸ್ಥಾನ ಹೊಂದಿವೆ.

ADVERTISEMENT

ಪ್ರಸ್ತುತ ಚುನಾವಣೆಯಲ್ಲಿ ಪಕ್ಷಗಳ ಬಲಾ ಬಲ ಏನೇ ಇದ್ದರೂ ಲೆಕ್ಕಾಚಾರ ತಲೆಕೆಳಗೆ ಮಾಡಲು ಬಿಜೆಪಿ, ಕಾಂಗ್ರೆಸ್ ತೆರೆಮರೆ ಪ್ರಯತ್ನ ನಡೆಸಿವೆ. ಇದರಿಂದ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸುತ್ತಿರುವುದರಿಂದ ಎಲ್ಲರ ಕಣ್ಣು ಪಕ್ಷೇತರರತ್ತ ನೆಟ್ಟಿವೆ.

ಬಿಸಿಬಿ ಮಹಿಳೆ (ಹಿಂದುಳಿದ ವರ್ಗ(ಬ) ಮಹಿಳೆ)ಗೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮುಕ್ತವಾಗಿದೆ. 23 ಸದಸ್ಯರಲ್ಲಿ ಬಿಜೆಪಿಯ (ಲಿಂಗಾಯತ ಮಹಿಳೆ) ಏಕೈಕ ಸದಸ್ಯೆ ಜಗದೇವಿ ಶಂಕರರಾವ್ ಗಡಂತಿ ಅವರು ಅಧ್ಯಕ್ಷರಾಗುವುದು ಖಚಿತವಾಗಿದೆ. ಇವರು ಪುರಸಭೆಗೆ ಎರಡನೇ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ಸದಸ್ಯೆ ಎಂಬುದು ವಿಶೇಷ.

ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದು ನಿಶ್ಚಿತ ಎನ್ನುವಷ್ಟರಲ್ಲಿಯೇ ಅದಕ್ಕೆ ಅಘಾತ ನೀಡಲು ಬಿಜೆಪಿ ಪಾಳಯ ತಂತ್ರಗಾರಿಕೆಯಲ್ಲಿ ತೊಡಗಿದೆ.

ಸದ್ಯ ಇಬ್ಬರು ಪಕ್ಷೇತರರು ಬಿಜೆಪಿ ಪರ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಬೆಂಬಲಿತರ ಸಂಖ್ಯೆ 7ಕ್ಕೆ ಏರಿದೆ. ಜತೆಗೆ ಶಾಸಕ, ಸಂಸದರು ತಲಾ ಒಂದು ಮತ ಇರುವುದರಿಂದ ಈ ಸಂಖ್ಯೆ 9 ಆಗುವುದು ನಿಶ್ಚಿತ. ಒಬ್ಬ ಕೈ ಸದಸ್ಯೆ ಕಮಲ ಪಕ್ಷದ ಜತೆಗೆ ಗುರುತಿಸಿಕೊಂಡಿದ್ದರಿಂದ ಈ ಬಲ 10ಕ್ಕೇರಲಿದೆ.

ಇಷ್ಟಾದರೂ ಬಹುಮತಕ್ಕೆ ಕೊರತೆ ಎದುರಾಗುತ್ತಿದ್ದು ಪಕ್ಷೇತರರಿಗೆ ಉಪಾಧ್ಯಕ್ಷ ನೀಡುವುದಾಗಿ ಆಸ್ವಾಸನೆ ನೀಡಿದರೆ, ಬಿಜೆಪಿ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.

ಬಿಜೆಪಿ ಕೇವಲ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವುದಕ್ಕಷ್ಟೆ ಸೀಮಿತವಾಗದೇ, ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ತುದಿಗಾಲ ಮೇಲೆ ನಿಂತಿದೆ. ಇದಕ್ಕಾಗಿ ಬಿಜೆಪಿ ಸದಸ್ಯರು ಹೈಕಮಾಂಡ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿದರೆ, ಕಾಂಗ್ರೆಸ್‌ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ.

ಸದಸ್ಯರಾಗಿ ಆಯ್ಕೆಯಾಗಿ 2 ವರ್ಷ ಗತಿಸಿದರೂ ಅಧಿಕಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸದಸ್ಯರಿಗೆ ಕೊನೆಗೂ ಅಧಿಕಾರ ಸಮೀಪಿಸಿದೆ. ಈ ಮೂಲಕ 30 ತಿಂಗಳ ಆಡಳಿತಾಧಿಕಾರಿಗಳ ಆಡಳಿತಕ್ಕೆ ಬ್ರೇಕ್ ಬೀಳಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರಾಸೆಯೋ ಅಥವಾ ಸಮಾಧಾನವೋ ಎಂಬುದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.