ಚಿಂಚೋಳಿ: ‘ಮಳೆಯಿಂದ ಹಾಳಾಗಿರುವ ರಸ್ತೆ, ಶಾಲಾ ಕಟ್ಟಡ ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿಗೆ ₹1 ಕೋಟಿ ಬಿಡುಗಡೆಯಾಗಿದೆ. ಶೀಘ್ರವೇ ಇನ್ನೂ ಒಂಡು ಕೋಟಿ ಹಣ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.
ತಾಲ್ಲೂಕು ಆಡಳಿತಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಕರೆ ಮಾಡಿ ಸಭೆಗೆ ಗೈರಾಗಿರುವ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಕುರಿತು ಗಮನ ಸೆಳೆದು ಕ್ರಮ ಕೈಗೊಳ್ಳಲು ತಿಳಿಸಿದರು.
ಸಭೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪಂಚಾಯತ್ ರಾಜ್ ತಾಂತ್ರಿಕ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಕೆಲ ಅಧಿಕಾರಿಗಳು ಗೈರಾಗಿದ್ದರಿಂದ ಗರಂ ಆದ ಶಾಸಕರು ಗೈರಾದವರಿಗೆ ನೋಟಿಸ್ ನೀಡುವಂತೆ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ. ಇಒ ಶಂಕರ ರಾಠೋಡ್, ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್, ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಚಂದುಲಾಲ ರಾಠೋಡ್, ಯುವರಾಜ ರಾಠೋಡ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ, ಲೋಕೋಪಯೋಗಿ ಇಲಾಖೆಯ ಶಾಖಾಧಿಕಾರಿ ಗಿರಿರಾಜ ಸಜ್ಜನಶೆಟ್ಟಿ, ಪಶು ಆಸ್ಪತ್ರೆಯ ಡಾ ಧನರಾಜ ಬೊಮ್ಮಾ, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ವೀರಶೆಟ್ಟಿ ರಾಠೋಡ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೆಶಕ ರಾಜಕುಮಾರ ಗೋವಿನ್, ಚಂದ್ರಪಳ್ಳಿ ನೀರಾವರಿ ಯೋಜನೆಯ ಚೇತನ ಕಳಸ್ಕರ್ ತಮ್ಮ ಇಲಾಖೆಯ ಬಗ್ಗೆ ವಿವರಿಸಿ ಮಳೆಯಿಂದ ಆಗಿರುವ ಹಾನಿ ಕುರಿತು ವಿವರಿಸಿದರು.
ಸಭೆ ನಡೆಯುತ್ತಿದ್ದಾಗ ಕಚೇರಿಗೆ ಬಂದಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪನಾಯಕ ಸುನೀಲ ವಲ್ಯಾಪುರೆ ಅವರು ಅಧಿಕಾರಿಗಳ ಪರಿಚಯ ಮಾಡಿಕೊಂಡು ಚನ್ನಾಗಿ ಕೆಲಸ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ತೋಟಗಾರಿಕಾ ಬೆಳೆಗಳ ಬೇಸಾಯಕ್ಕೆ ಪೂರಕ ವಾತಾವರಣವಿದೆ. ರೈತರಲ್ಲಿ ಅರಿವು ಮೂಡಿಸಿದರೆ ತೋಟಗಾರಿಕಾ ಬೆಳೆಗಳ ಬೇಸಾಯ ಕ್ಷೇತ್ರ ವಿಸ್ತಾರಗೊಳ್ಳಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.