ADVERTISEMENT

ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೈಯಲ್ಲಿ ಪೊರಕೆಗಳ ಪ್ರದರ್ಶಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:50 IST
Last Updated 10 ಜನವರಿ 2026, 7:50 IST
ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಚಿಂಚೋಳಿ ನಿವಾಸಿಗಳು ಶುಕ್ರವಾರ ಕಲಬುರಗಿಯಲ್ಲಿ ಖಾಲಿ ಕೊಡಗಳು, ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ಚಿತ್ರ
ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಚಿಂಚೋಳಿ ನಿವಾಸಿಗಳು ಶುಕ್ರವಾರ ಕಲಬುರಗಿಯಲ್ಲಿ ಖಾಲಿ ಕೊಡಗಳು, ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ಸಮರ್ಪಕ‌ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಜಿಲ್ಲೆಯ ಚಿಂಚೋಳಿ ‌ಪಟ್ಟಣದ 17ನೇ ವಾರ್ಡ್ ನಿವಾಸಿಗಳು ನಗರದಲ್ಲಿ ಶುಕ್ರವಾರ ಸುಡುಬಿಸಿಲಿನಲ್ಲಿ ಖಾಲಿ ಕೊಡಗಳು ಹಾಗೂ ಪೊರಕೆಗಳೊಂದಿಗೆ ಪ್ರತಿಭಟನೆ ನಡೆಸಿದರು.

ನಗರದ ಸರ್ದಾರದ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸೇರಿದ ಚಿಂಚೋಳಿಯ ಆಶ್ರಯ ಕಾಲೊನಿ, ವಿದ್ಯಾನಗರ ಹಾಗೂ ಬೆಳ್ಳಿ ಬೆಳಕು ಕಾಲೊನಿ ನಿವಾಸಿಗಳು ‘ಬೇಕೆ ಬೇಕು, ನೀರು ಬೇಕು’ ಎಂದು ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಚಿಂಚೋಳಿ ಪಟ್ಟಣದ 17ನೇ ವಾರ್ಡ್‌ನಲ್ಲಿ ಮೂರ್ನಾಲ್ಕು ತಿಂಗಳಿಂದ ಕುಡಿಯಲು ನೀರಿಲ್ಲ‌. ಅಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರೇ ಹೆಚ್ಚಿನ ‌ಸಂಖ್ಯೆಯಲ್ಲಿದ್ದಾರೆ‌. ನೀರಿನ ಸಮಸ್ಯೆ ಪರಿಹರಿಸುವಂತೆ ಅಲ್ಲಿನ ನಿವಾಸಿಗಳು ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಅಲ್ಲಿಂದ‌ 84 ಕಿ.ಮೀ ದೂರದ ಜಿಲ್ಲಾ ಕೇಂದ್ರಕ್ಕೆ ಬರುವಂತಾಗಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಭಾರತ ಮುಕ್ತಿ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಮಾತನಾಡಿ, ‘ದೇಶವು ಈಗಾಗಲೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಂಡಿದೆ. ಆದರೆ ನಮಗೆ ಇಂದಿಗೂ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ನಾವೇನು ಸಿ.ಸಿ ರಸ್ತೆ, ಚರಂಡಿ, ಮನೆಗಳನ್ನು ಕೇಳುತ್ತಿಲ್ಲ. ಕುಡಿಯಲು ನೀರು ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಥಳೀಯ ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಸಮಸ್ಯೆ ಹೇಳಿದ್ದೇವೆ. ನಾವು ಹೇಳುತ್ತೇವೆ, ನೋಡುತ್ತೇವೆ, ಮಾಡುತ್ತೇವೆ ಎಂಬ ಭರವಸೆ ಕೇಳಿ ಸಾಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಇದೀಗ ಕುಟುಂಬಗಳ ಸಮೇತ ಕೈಯಲ್ಲಿ ಖಾಲಿ ಕೊಡ ಹಾಗೂ ಪೊರಕೆ ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಆರಂಭಿಸಿದ್ದೇವೆ. ನಿರ್ಗತಿಕರು ದುಡ್ಡಿನ ಭಿಕ್ಷೆಗಾಗಿ ಅಲೆದಾಡುವಂತೆ ನಾವು ಖಾಲಿ ಕೊಡ ಹಿಡಿದು ಪಕ್ಕದ ಓಣಿಗಳು, ಮನೆಗಳಿಗೆ ನೀರಿಗಾಗಿ ಅಲೆಯುವಂತಾಗಿದೆ. ಅಧಿಕಾರಿಗಳು ಕೂಡಲೇ ಮುತುವರ್ಜಿ ನೀರಿನ ಸಮಸ್ಯೆ ಪರಿಹರಿಸಬೇಕು. ಸಮರ್ಪಕ ನೀರು ಪೂರೈಸದಿದ್ದರೆ ಕೈಯಲ್ಲಿರುವ ಪೊರಕೆ ಮೈಮೇಲೆ ಬರುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಶ್ರಯ ಕಾಲೊನಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. 8 ವರ್ಷದ ಮಕ್ಕಳಿಂದ ಹಿಡಿದು ಎಲ್ಲರೂ ನೀರಿಗಾಗಿ ನಿತ್ಯ ಅಲೆಯುವ ಸ್ಥಿತಿಯಿದೆ. ನಿತ್ಯ ನೀರಿಗಾಗಿ ಅಲೆಯುವ ಮಕ್ಕಳು ಶಾಲೆಗೆ ಹೋಗಲೂ ತಡವಾಗುತ್ತಿದೆ. ಹಲವರು ದಿನ ಕೂಲಿಯನ್ನೇ ಕಳೆದುಕೊಳ್ಳುವಂತಾಗಿದೆ. ಸಂಬಂಧಿಸಿತ ಅಧಿಕಾರಿಗಳು ಕೂಡಲೇ ನಮಗೆ ಸಮರ್ಪಕ ನೀರು ಒದಗಿಸಿ ನೆರವಾಗಬೇಕು’ ಎಂದು 17ನೇ ವಾರ್ಡ್‌ ನಿವಾಸಿ ಸುವರ್ಣ ಮನವಿ ಮಾಡಿದರು.

‘ಸೋಮವಾರದ (ಜ.12) ಹೊತ್ತಿಗೆ ನೀರಿನ ಸಮಸ್ಯೆ ಪರಿಹರಿಸಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಪ್ರತಿಭಟನನಿರತರು ಮನವಿ ಸಲ್ಲಿಸಿದರು. ‘ಅಧಿಕಾರಿಗಳು ಕೊಟ್ಟ ಭರವಸೆ ಈಡೇರಿಸದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಮನೆ ಎದುರು ಧರಣಿ ನಡೆಸಲಾಗುವುದು’ ಎಂದು ಪ್ರಕಟಿಸಿದರು. 

ಪ್ರತಿಭಟನೆಯಲ್ಲಿ ಜಗನ್ನಾಥ ರಾಮತೀರ್ಥ, ಸಿದ್ದು ರಂಗನೂರ, ಲೋಹಿತ, ಹರೀಶ ದೇಗಲಮಡಿ, ವಸಂತ ಮೋತಕಪಳ್ಳಿ, ಅಕ್ಕಮ್ಮ, ನಾಗಮ್ಮ, ಸಾಯದಬಿ, ಸುಮಿತ್ರಾ, ಶ್ಯಾಮ, ನೀಲಮ್ಮ, ವಿಜಯಲಕ್ಷ್ಮಿ, ಅನಿತಾ, ಪ್ರಭಾವತಿ, ಸುಮಿತ್ರಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.