
ಚಿಂಚೋಳಿ: ಹಿಂಗಾರಿನ ಪ್ರಮುಖ ಎಣ್ಣೆಕಾಳು ಬೆಳೆಯಾದ ಬಿಳಿ ಕುಸುಬೆ ಬೇಸಾಯ ಕ್ಷೇತ್ರ ತಾಲ್ಲೂಕಿನಲ್ಲಿ ವಿಸ್ತರಣೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಕುಸುಬೆ ಬೇಸಾಯ ಪ್ರಮಾಣ ಸುಮಾರು 100 ಹೆಕ್ಟೇರ್ ಹೆಚ್ಚಾಗಿರುವ ಅಂದಾಜಿದೆ.
ನಗರ ಪಟ್ಟಣಗಳಲ್ಲಿ ಯಂತ್ರಚಾಲಿತ ಎಣ್ಣೆ ಗಾಣಗಳ ಸಂಖ್ಯೆ ಹೆಚ್ಚಿವೆ. ಇದರ ನಡುವೆ ಮಾರುಕಟ್ಟೆಯಲ್ಲಿ ದೊರೆಯುವ ಎಣ್ಣೆಗಿಂತಲೂ ಎಣ್ಣೆ ಗಾಣದಿಂದ ತೆಗೆದ ಎಣ್ಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದರಿಂದ ಕುಸುಬೆಗೆ ದರವು ಹೆಚ್ಚಾಗಿರುವುದರಿಂದ ರೈತರು ಕುಸುಬೆ ಬೇಸಾಯದತ್ತ ಹೊರಳಿದ್ದಾರೆ.
ಅಂಗಡಿಗಳಲ್ಲಿ ದೊರೆಯುವ ಎಣ್ಣೆಗಿಂತಲೂ ಅಧಿಕಾರಿಗಳು ಹಾಗೂ ರೈತರು ಕುಸುಬೆ ಹಾಕಿ ಗಾಣದಿಂದ ಎಣ್ಣೆ ಪಡೆದು ಅಡುಗೆಗೆ ಬಳಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಗಾಣದ ಎಣ್ಣೆಗೆ ಬೇಡಿಕೆಯೂ ಹೆಚ್ಚಾಗಿರುವುದರಿಂದ ರೈತರು ಕುಸುಬೆ ಬೇಸಾಯದತ್ತ ಆಕರ್ಷಿಸಲು ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ದೊರೆಯುವ ಎಣ್ಣೆಗಿಂತಲೂ ದುಪ್ಪಟ್ಟು ದರ ನೀಡಿ ಗ್ರಾಹಕರು ಗಾಣದ ಎಣ್ಣೆ ಖರೀದಿಸುತ್ತಿದ್ದಾರೆ ಎಣ್ಣೆ ಗಾಣಗಳ ಮಾಲೀಕರು ಬೇರೆ ರಾಜ್ಯಗಳಿಂದ ಕುಸುಬೆ ತಂದು ಗಾಣಕ್ಕೆ ಹಾಕಿ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದಾರೆ. ಈಗ 500 ಹೆಕ್ಟೇರ್‌ನಲ್ಲಿ ಕುಸುಬೆ ಬೆಳೆದರೂ ಎಣ್ಣೆ ಗಾಣಗಳಿಗೆ ಕಾಳಿನ ಕೊರತೆಯಾಗಲಿದೆ.
ಇದರ ಜತೆಗೆ ಕೃಷಿ ಇಲಾಖೆ ಪ್ರಸಕ್ತ ವರ್ಷ ಎಣ್ಣೆ ಬೇಸಾಯ ಕ್ಷೇತ್ರ ವಿಸ್ತರಣೆಗೆ ತಾಲ್ಲೂಕಿನಲ್ಲಿ ಉಚಿತವಾಗಿ ಸುಮಾರು 50ಕ್ಕೂ ಹೆಚ್ಚು ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಿದೆ. ಕೃಷಿ ಇಲಾಖೆ ಪ್ರಸಕ್ತ ವರ್ಷ 600 ಹೆಕ್ಟೇರ್ ಕುಸುಬೆ ಬೇಸಾಯ ಅಂದಾಜಿಸಿತ್ತು. ಆದರೆ, ಬಿತ್ತನೆ ನಡೆಸಿದ ಹೊಲಗಳಲ್ಲಿ ಅಧಿಕ ತೇವಾಂಶದಿಂದ ಹಲವು ಕಡೆ ಕುಸುಬೆ ಮೊಳಕೆ ಬಂದಿಲ್ಲ ಹೀಗಾಗಿ 500 ಹೆಕ್ಟೇರ್ ಸಮೀಪದಲ್ಲಿ ಬೇಸಾಯ ಕ್ಷೇತ್ರ ದೃಢಪಟ್ಟಿದೆ.
ಸದ್ಯ ಬೆಳೆ ಬಹುತೇಕ ಹೂವಾಡುವ ಮತ್ತು ಕಾಳು ಕಟ್ಟುವ ಹಂತದಲ್ಲಿದ್ದು, ಫೆಬ್ರುವರಿ ಅಂತ್ಯಕ್ಕೆ ಕೊಯ್ಲಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಪ್ರಸಕ್ತ ವರ್ಷ ಅಧಿಕ ಮಳೆಯಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಉದ್ದು, ಹೆಸರು, ಸೋಯಾ ಬೆಳೆಯೂ ಕೈಗೆಟುಕಿಲ್ಲ. ಇದರಿಂದ ರೈತರು ಹಿಂಗಾರಿನ ಜೋಳ ಬಿತ್ತನೆ ಜತೆಗೆ ಅಲ್ಲಲ್ಲಿ ಕುಸುಬೆ ಬೇಸಾಯ ನಡೆಸಿದ್ದು, ಬೆಳೆ ಉತ್ತಮವಾಗಿ ಗೋಚರಿಸಿದೆ.
ಚಿಂಚೋಳಿ ತಾಲ್ಲೂಕಿನಲ್ಲಿ ಕುಸುಬೆ ಬೇಸಾಯದತ್ತ ರೈತರು ಹೆಚ್ಚಾಗಿ ಹೊರಳಿದ್ದು ಉತ್ತಮ ನಡೆಯಾಗಿದೆ. ಎಣ್ಣೆ ಕಾಳುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಪ್ರಸಕ್ತ ವರ್ಷ ಕುಸುಬೆ ಉತ್ತಮ ಇಳುವರಿ ಬಂದರೆ ಮುಂದಿನ ವರ್ಷ ಬೇಸಾಯ ಕ್ಷೇತ್ರ ಇನ್ನಷ್ಟು ಹೆಚ್ಚಾಗಲಿದೆವೀರಶೆಟ್ಟಿ ರಾಠೋಡ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ
ಪ್ರಾಂಶುಪಾಲರ ಕೃಷಿ ಪ್ರೇಮ
ಚಿಂಚೋಳಿಯ ನಿವಾಸಿ ತಾಲ್ಲೂಕಿನ ಸುಲೇಪೇಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಶರಥ ನಾಯನೂರು ಅವರ ಕೃಷಿ ಪ್ರೇಮ ಮಾದರಿಯಾಗಿದೆ. ಕಾಲೇಜು ಸೇವೆಯ ಜತೆಗೆ ಸ್ವಂತ ಕೃಷಿಯಲ್ಲಿ ತೊಡಗಿರುವ ಅವರು ಪ್ರಸಕ್ತ ವರ್ಷ 6 ಎಕರೆಯಲ್ಲಿ ಕುಸುಬೆ ಬೇಸಾಯ ನಡೆಸುತ್ತಿದ್ದಾರೆ. ಬೆಳೆ ಹುಲುಸಾಗಿ ಬೆಳೆದಿದ್ದು ಕಾಳು ಕಟ್ಟುವ ಹಂತದಲ್ಲಿದೆ. ಎಕರೆಗೆ 6 ಕ್ವಿಂಟಲ್‌ಗೂ ಅಧಿಕ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ’ನಾನು ಮೊದಲ ಬಾರಿಗೆ ಕುಸುಬೆ ಬೇಸಾಯ ನಡೆಸಿದ್ದೇನೆ. ನನ್ನ ಗೆಳೆಯರ ಅಂಗಡಿಯಿಂದ ಬೀಜ ತಂದು ಬಿತ್ತನೆ ನಡೆಸಿದ್ದು ಫಸಲು ಉತ್ತಮವಾಗಿದೆ’ ಎನ್ನುತ್ತಾರೆ ದಶರಥ ನಾಯನೂರ. ಇವರು ಪ್ರಸಕ್ತ ವರ್ಷ ಪ್ರತಿಕೂಲ ವಾತಾವರಣದಲ್ಲೂ ಸೋಯಾ ಬೇಸಾಯದಲ್ಲಿ ಯಶಸ್ವಿಯಾಗಿದ್ದು 5 ಎಕರೆಯಲ್ಲಿ 25 ಕ್ವಿಂಟಲ್ ಇಳುವರಿ ತೆಗೆದಿದ್ದಾರೆ. ಬಹಳಷ್ಟ ರೈತರ ಜಮೀನಿನಲ್ಲಿ ಎಕರೆಗೆ ಒಂದೆರಡು ಕ್ವಿಂಟಲ್ ಇಳುವರಿ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.