ಚಿಂಚೋಳಿ: ಇಲ್ಲಿನ ಚಂದಾಪುರದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್ ಮಂಗಳವಾರ ದಿಡೀರ್ ಭೇಟಿ ನೀಡಿ ಬಾಲಕಿಯರ ಅಹವಾಲು ಆಲಿಸಿದರು.
‘ಊಟದಲ್ಲಿ ತಾರತಮ್ಯ ಮಾಡುತ್ತಿರುವುದು ಕಂಡು ಬಂದಿದ್ದು, ವಾರದಲ್ಲಿ ಪ್ರತಿದಿನ ನೀಡಬೇಕಾದ ಚಪಾತಿ ಅಥವಾ ರೋಟಿಯನ್ನು 2 ಎರಡು ದಿನ ಮಾತ್ರ ಚಪಾತಿ ನೀಡುತ್ತಾರೆ. ಬಾಲಕಿಯರು ಮನೆಗೆ ಹೋಗಿದ್ದು ಅವರು ಮರಳಿ ನಿಲಯಕ್ಕೆ ಬಂದಾಗ, ಆ ದಿನ ಮಧ್ಯಾಹ್ನ ಅವರಿಗೆ ಊಟ ನೀಡುವುದಿಲ್ಲ. ಮನೆಯಿಂದ ಬಂದ ಮೇಲೆ ನಿನಗ್ಯಾಕೆ? ಊಟ ಕೊಡಬೇಕು? ಮನೆಯಿಂದ ಬುತ್ತಿ ತರಬೇಕು ಅಡುಗೆ ಸಿಬ್ಬಂದಿ ಹೇಳುತ್ತಾರೆ’ ಎಂದು ಬಾಲಕಿಯರು ದೂರಿದ್ದಾರೆ.
‘ಮೆನು ಪ್ರಕಾರ ಚಪಾತಿ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೆಶಕರ ಕಚೇರಿಗೆ, ಸಹಾಯಕ ನಿರ್ದೆಶಕರಿಗೆ ಮತ್ತು ವಾರ್ಡ್‌ವರಿಂದ ಕರೆ ಮಾಡಿ ವಿವರಣೆ ಪಡೆದಾಗ, ಒಬ್ಬರ ಮೇಲೊಬ್ಬರು ದೂರಿದರು. ಉಗ್ರಾಣದ ಅಧಿಕಾರಿಗಳು ಗೋಧಿ ದಾಸ್ತಾನು ಸಾಕಷ್ಟಿದೆ ಕೊರತೆಯಿಲ್ಲ. ಇಂಡೆಂಟ್ ಕಳುಹಿಸಿದರೆ ನಾವು ನೀಡುತ್ತೇವೆ ಎಂದಿದ್ದಾರೆ’ ಎಂದು ಶಂಕರ ರಾಠೋಡ್ ಪ್ರಜಾವಾಣಿಗೆ ತಿಳಿಸಿದರು.
ಮೆನು ಪ್ರಕಾರ ಕಡ್ಡಾಯವಾಗಿ ಊಟ ನೀಡಬೇಕು. ತರಕಾರಿ ಇಲ್ಲದಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದು, ನಿತ್ಯ ಚಪಾತಿ ನೀಡುವುದರ ಜತೆಗೆ ಮೆನುವಿನಲ್ಲಿ ತೋರಿಸಿದತಂತೆ ಊಟ ಕೊಡಬೇಕು ಎಂದು ತಾಕೀತು ಮಾಡಿದರು.
ಸಮೀಪದಲ್ಲಿಯೇ ಇರುವ ಕಾಲೇಜು ಬಾಲಕರ ವಸತಿ ನಿಲಯಕ್ಕೆ ಭೇಟಿ ಮಕ್ಕಳ ಅಹವಾಲು ಆಲಿಸಿದಾಗ ನಮಗೆ ನಿರಂತರ ರೊಟ್ಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.