ಚಿಂಚೋಳಿ ತಾಲ್ಲೂಕಿನ ಮರಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಹಸಿರಿನ ಸೊಬಗು
ಚಿಂಚೋಳಿ: ತಾಲ್ಲೂಕಿನ ಮರಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಹಸಿರು ಹೊನಲಿನಿಂದ ಕಂಗೊಳಿಸುತ್ತಿದೆ. ಹಸಿರ ಸೊಬಗು, ಸ್ವಚ್ಛತೆ, ತರಹೇವಾರಿ ಗಿಡಗಳು ಶಾಲೆಯ ಸೌಂದರ್ಯಕ್ಕೆ ಸಾಕ್ಷಿಯಾಗಿವೆ.
ಕಾಗದ ಹೂ, ಚಕ್ರ ಮಲ್ಲಿಗೆ, ಸೌಂದರ್ಯ ವರ್ಧನೆಯ ಅಲಂಕಾರಿಕ ಗಿಡಗಳು, ಬಾನೆತ್ತರ ಬೆಳೆದು ನಿಂತ ಅಶೋಕ ಗಿಡಗಳು ಶಾಲಾ ಪರಿಸರಕ್ಕೆ ಕಳೆ ಹೆಚ್ಚಿಸಿದ ತೆಂಗಿನ ಮರಗಳು, ನೆರಳಿನ ಹೊಂಗೆ ಮರ ಮತ್ತು ವಿವಿಧ ಅರಣ್ಯದ ಸಸ್ಯಗಳು, ಮಾವು, ನಿಂಬೆ, ದಾಸವಾಳ, ಮಲ್ಲಿಗೆ, ನೇರಳೆ, ಬಾಳೆ, ನೆಲ್ಲಿ, ಬಾದಾಮಿ ಗಿಡ ಬೆಳೆಸಿ ಮಾದರಿ ಶಾಲೆಯಾಗಿಸಿದ್ದಾರೆ.
ಗರಿಕೆಯ ಹುಲ್ಲು ಹಾಸಿಗೆ, ಆವರಣದಲ್ಲಿ ಸಿಸಿ ರಸ್ತೆಯ ಪಾದಚಾರಿ ಮಾರ್ಗ, ಶಹಾಬಾದ ಕಲ್ಲಿನ ನೆಲ ಹಾಸು ಮೂಲಕ ಗಮನ ಸೆಳೆದಿದೆ. ಸಮದಟ್ಟಾದ ಆಟದ ಮೈದಾನ, ಆವರಣ ಗೋಡೆ, ವಿವಿಧ ಹಣ್ಣಿನ ಗಿಡಗಳು ಬೆಳೆಸಲಾಗಿದ್ದು ಶಾಲೆಯ ಹಚ್ಚ ಹಸಿರಿನ ಸುಂದರ ಪರಿಸರ ಖಾಸಗಿ ಶಾಲೆಯನ್ನು ಮೀರಿಸುವಂತೆ ಆಕರ್ಷಿಸುತ್ತಿದೆ.
ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮರ ಗಿಡಗಳು ಮನಸ್ಸಿಗೆ ಮುದ ನೀಡುತ್ತಿದೆ. ಸಮುದಾಯದ ಸಹಭಾಗಿತ್ವವಿದ್ದರೆ ಹಾಗೂ ಶಿಕ್ಷಕರಲ್ಲಿ ಇಚ್ಛಾಶಕ್ತಿ ಇದ್ದರೆ ಶಾಲೆ ಆಕರ್ಷಣೆಯ ಕೇಂದ್ರವಾಗಿಸಬಹುದೆಂಬುದಕ್ಕೆ ಮರಪಳ್ಳಿ ಶಾಲೆ ಸಾಕ್ಷಿಯಾಗಿದೆ. ಶಾಲೆಯ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿರುವ ಮರಪಳ್ಳಿ ಶಾಲೆ ಸುಂದರ ಪರಿಸರ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ.
ಹಣ್ಣಿನ ಗಿಡಗಳು ಕಾಯಿ ಬಿಟ್ಟು ಸಮೃದ್ಧಗೊಂಡಿದ್ದರೆ, ಗಿಡಗಳಲ್ಲಿ ಹೂವುಗಳು ಅರಳಿ ನಗು ಚೆಲ್ಲುತ್ತಿವೆ. ಗಗನ ಚುಂಬಿಸುತ್ತಿರುವ ಅಶೋಕ ಗಿಡಗಳು ಮೈನವಿರೇಳಿಸಿದರೆ ತೆಂಗಿನ ಮರಗಳು ಬೆಳವಣಿಗೆ ಹೊಂದುತ್ತಿವೆ. ಈ ಶಾಲೆ ಪ್ರವೇಶಿದರೆ ನಿಮಗೆ ಸುಂದರವಾದ ನಾಮಫಲಕ ನಿಮ್ಮನ್ನು ಸ್ವಾಗತಿಸಿದರೆ ಶಾಲೆಯ ಹಸಿರ ಸಿರಿ ಮನಸ್ಸಿಗೆ ಮುದ ನೀಡುತ್ತದೆ. ಅಂದವಾದ ಕೊಠಡಿಗಳ ಸೌಲಭ್ಯವೂ ಮಕ್ಕಳ ಕಲಿಕೆಗೆ ಪ್ರೇರಣೆ ನೀಡುತ್ತಿವೆ.
ಶಾಲೆಯಲ್ಲಿ 190 ಮಕ್ಕಳ ದಾಖಲಾತಿಯಿದ್ದು, 10 ಮಂಜೂರಾದ ಹುದ್ದೆಗಳ ಪೈಕಿ 8 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷೆ ಸಂಗೀತಾ ಮತ್ತು ಗ್ರಾಮಸ್ಥರ ಸಹಕಾರ ಮತ್ತು ಸಹಭಾಗಿತ್ವ ಮಾದರಿಯಾಗಿದೆ.
ಗಿಡಗಳನ್ನು ಒಣಗದಂತೆ ಕಾಪಾಡಿದ್ದೇವೆ. ನಿತ್ಯ ನೀರುಣಿಸುತ್ತ ಗರಿಕೆ ಬೆಳೆಸಿ ಹಸಿರು ಬೆಳೆಸಿದ್ದೇವೆ. ನಮ್ಮ ತಾಲ್ಲೂಕಿನಲ್ಲಿಯೇ ಇಷ್ಟು ಸುಂದರ ಪರಿಸರ ಹೊಂದಿರುವ ಶಾಲೆ ಬೇರೊಂದಿಲ್ಲ.– ರಘುನಾಥ ಪವಾರ, ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.