ADVERTISEMENT

ಅಧಿಸೂಚನೆ ಪ್ರಕಟ: ಇನ್ನು ಚಿಂಚೋಳಿ ಉಪ ಚುನಾವಣೆ ಕದನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:10 IST
Last Updated 22 ಏಪ್ರಿಲ್ 2019, 14:10 IST
   

ಕಲಬುರ್ಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿಯಿತು ಎನ್ನುವಷ್ಟರಲ್ಲಿಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕದನಕ್ಕೆ ಮುಹೂರ್ತ ನಿಗದಿ ಆಗಿದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವಈ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

ಹಿಂದಿನ ಎರಡೂ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಡಾ.ಉಮೇಶ ಜಾಧವ ಗೆಲುವು ಸಾಧಿಸಿದ್ದರು. ಇಲ್ಲಿ ಗೆದ್ದವರ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಪ್ರತೀತಿ ಇದ್ದು, ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದರೆ, ಈಗ ಸಮ್ಮಿಶ್ರ ಸರ್ಕಾರ ಇದೆ.

ADVERTISEMENT

ಬದಲಾದ ರಾಜಕೀಯದಿಂದಾಗಿ ಡಾ.ಉಮೇಶ ಜಾಧವ ಶಾಸಕ ಸ್ಥಾನ ತೊರೆದು, ಬಿಜೆಪಿ ಸೇರಿ ಲೋಕಸಭೆಗೆ ಸ್ಪರ್ಧಿಸಿದ್ದಾರೆ.

ತೆರವಾದ ಸ್ಥಾನಕ್ಕೆ ಆರು ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂಬುದು ನಿಯಮ. ಉಮೇಶ ಜಾಧವ ಅವರು ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್‌ ರಮೇಶಕುಮಾರ್‌ ಅವರು ಏಪ್ರಿಲ್‌ 1ರಂದು ಅಂಗೀಕರಿಸಿದ್ದರು.

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದಿಂದ ತೆರವಾದ ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರಕ್ಕೆ ಚುನಾವಣಾ ಆಯೋಗ ಏಪ್ರಿಲ್ 9ರಂದು ಉಪ ಚುನಾವಣೆ ಘೋಷಿಸಿತ್ತು. ಚಿಂಚೋಳಿ ಉಪ ಚುನಾವಣೆ ಮುಂದಕ್ಕೆ ಹೋಯಿತು ಎಂದು ‘ಮಹತ್ವಾಕಾಂಕ್ಷೆಯುಳ್ಳುವರು’ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕುಂದಗೋಳ ಕ್ಷೇತ್ರ ತೆರವಾಗಿ 19 ದಿನಗಳಲ್ಲಿ ಉಪ ಚುನಾವಣೆ ಘೋಷಿಸಿದ್ದ ಚುನಾವಣಾ ಆಯೋಗ, ಚಿಂಚೋಳಿ ಕ್ಷೇತ್ರಕ್ಕೆ ಕೇವಲ 16 ದಿನಗಳಲ್ಲಿ ಉಪ ಚುನಾವಣೆ ಘೋಷಿಸಿದೆ. ಇದರ ‘ಬಿಸಿ’ ಕೆಲವರಿಗೆ ತಟ್ಟಿದೆ.

ನೀತಿ ಸಂಹಿತೆ

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಗೂ ಇದು ಅನ್ವಯವಾಗಲಿದೆ.

ಮತದಾರರು: ಜನವರಿ 1, 2019ರ ವರೆಗಿನ ಅವಧಿಯ ವರೆಗೆ ಮತದಾರರನ್ನು ಪರಿಗಣಿಸಿದ್ದು, ಒಟ್ಟು1,93,782 ಮತದಾರರು ಇದ್ದಾರೆ. ಅವರಲ್ಲಿ 98,994 ಪುರುಷರು, 94,772 ಮಹಿಳೆಯರು ಹಾಗೂ 16 ಇತರೆ ಮತದಾರರು, 1,853 ಅಂಗವಿಕಲ ಮತದಾರರು ಹಾಗೂ 79 ಸೇವಾ ಮತದಾರರು ಇದ್ದಾರೆ. ಈ ಬಾರಿ 3,159 ಹೊಸ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಹೊಸ ಮತದಾರರನ್ನು ಸೇರಿಸಲು ಈಗ ಅವಕಾಶ ಇಲ್ಲ. ಅರ್ಜಿ ಸಲ್ಲಿಸಬಹುದು. ಆದರೆ, ಸದ್ಯ ಅವುಗಳ ವಿಲೇವಾರಿ ಮಾಡುವುದಿಲ್ಲ ಎನ್ನುತ್ತಾರೆ ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ.

ವೇಳಾಪಟ್ಟಿ

ಏ.29 ನಾಮಪತ್ರ ಸಲ್ಲಿಸಲು ಕೊನೆ ದಿನ

ಏ.30 ನಾಮಪತ್ರಗಳ ಪರಿಶೀಲನೆ

ಮೇ 2 ನಾಮಪತ್ರ ವಾಪಸ್‌ ಪಡೆಯಲು ಕೊನೆದಿನ

ಮೇ 19 ಮತದಾನ

ಮೇ 23 ಮತ ಎಣಿಕೆ

ಒಂದು ನಾಮಪತ್ರ ಸಲ್ಲಿಕೆ

ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಗೆನಾಮಪತ್ರ ಸಲ್ಲಿಸಲು ಮೊದಲ ದಿನವಾದ ಸೋಮವಾರ ಕಾಂಗ್ರೆಸ್ ಪಕ್ಷದಿಂದ ಶಿವಕುಮಾರ ಖತಲಪ್ಪ ಕೊಳ್ಳೂರು ನಾಮಪತ್ರ ಸಲ್ಲಿಸಿದ್ದಾರೆ ಎಂದುಚುನಾವಣಾಧಿಕಾರಿ ಸೋಮಶೇಖರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.