ADVERTISEMENT

ಬಸವೇಶ್ವರ ಮೂರ್ತಿಗೆ ಅವಮಾನ: 27ರಂದು ಚಿತ್ತಾಪುರ ಬಂದ್‌ಗೆ ನಿರ್ಣಯ

ಮಠಾಧೀಶರಿಂದ ಬಸವೇಶ್ವರ ಮೂರ್ತಿಗೆ ಜಲಾಭಿಷೇಕ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 5:07 IST
Last Updated 25 ಜೂನ್ 2022, 5:07 IST

ಚಿತ್ತಾಪುರ: ಇಲ್ಲಿನ ಲಾಡ್ಜಿಂಗ್‌ ಕ್ರಾಸ್‌ ಸಮೀಪದ ಅಶ್ವರೂಢ ಬಸವೇಶ್ವರ ಮೂರ್ತಿಗೆ ಅವಮಾನಿಸಿದ ಘಟನೆ ಖಂಡಿಸಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಮತ್ತು ಮುಸ್ಲಿಂ ಸಮಾಜದ ಮುಖಂಡರು ಜೂನ್‌ 27ರಂದು ಚಿತ್ತಾಪುರ ಬಂದ್‌ಗೆ ಕರೆ ನೀಡಿದ್ದಾರೆ.

‘ಪಟ್ಟಣದಲ್ಲಿ ಶುಕ್ರವಾರ ಸಭೆಯಲ್ಲಿ ಎರಡು ಕೋಮುಗಳ ಮುಖಂಡರು ಪರಸ್ಪರ ಚರ್ಚಿಸಿ ಸ್ವಯಂಪ್ರೇರಿತ ಬಂದ್‌ಗೆ ತೀರ್ಮಾನಿಸಿದ್ದಾರೆ’ ಎಂದು ವೀರಶೈವ ಸಮಾಜದ ಮುಖಂಡ ನಾಗರೆಡ್ಡಿ ಪಾಟೀಲ್ ಕರದಾಳ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಬಂದ್ ಇರಲಿದೆ. ಬೆಳಿಗ್ಗೆ 10ಕ್ಕೆ ಅಕ್ಕಮಹಾದೇವಿ ಮಂದಿರದಿಂದ ಎಪಿಎಂಸಿ ದ್ವಾರದ ಬಳಿಯ ಬಸವೇಶ್ವರ ಮೂರ್ತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ಮಠಾಧೀಶರು ಭಾಗವಹಿಸುವರು. ಅವರಿಂದ ಮೂರ್ತಿಗೆ ಜಲಾಭಿಷೇಕ, ಮಾಲಾರ್ಪಣೆ ನಡೆಯಲಿದೆ‌’ ಎಂದು ಅವರು ವಿವರಿಸಿದರು.

ADVERTISEMENT

‘ಬಸವೇಶ್ವರ ಮೂರ್ತಿಗೆ ಅವಮಾನಿಸಿದ ಕಿಡಿಗೇಡಿಯ ಬಂಧನವಾಗಿದೆ. ಆರೋಪಿ ಮುಸ್ಲಿಂ ಆಗಿದ್ದರೂ ಘಟನೆ ಕುರಿತು ಮುಸ್ಲಿಂ ಮುಖಂಡರು ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಇಲ್ಲಿನ ಕೋಮುಭಾವೈಕ್ಯ ಮತ್ತು ಸಹೋದರತ್ವಕ್ಕೆ ಉತ್ತಮ ನಿದರ್ಶನ’ ಎಂದು ಅವರಿಗೆ
ತಿಳಿಸಿದರು.

ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ, ರಾವೂರು ಮಠದ ಸಿದ್ಧಲಿಂಗ ದೇವರು, ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಶಿವಾನಂದ ಪಾಟೀಲ್, ರಮೇಶ ಮರಗೋಳ, ಜಗದೇವರೆಡ್ಡಿ ರಾಮತೀರ್ಥ,
ಮುಕ್ತಾರ್ ಪಟೇಲ್, ಎಂ.ಎ.ರಸೀದ್, ಮಹ್ಮದ್ ರಸೂಲ್ ಮುಸ್ತಫಾ, ಮಕ್ಬೂಲ್ ನಾಜ್, ಶೇಕ್ ಬಬ್ಲು, ಚಂದ್ರಶೇಖರ ಅವಂಟಿ, ಸಿದ್ದುಗೌಡ ಅಫಜಲಪುರಕರ್, ನಾಗರೆಡ್ಡಿ ಗೋಪಸೇನ್, ಚಂದ್ರಶೇಖರ ಸಾತನೂರು, ಅಣ್ಣರಾವ ಪಾಟೀಲ್ ಮುಡಬೂಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.