ADVERTISEMENT

ಚಿತ್ತಾಪುರ: ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಬಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 5:47 IST
Last Updated 3 ಆಗಸ್ಟ್ 2022, 5:47 IST
ಕಲಬುರಗಿಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿ ಚಾಲಕನ‌ ನಿಯಂತ್ರಣ ತಪ್ಪಿ‌ ಹೊಲಕ್ಕೆ ನುಗ್ಗಿದ ಬಸ್
ಕಲಬುರಗಿಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿ ಚಾಲಕನ‌ ನಿಯಂತ್ರಣ ತಪ್ಪಿ‌ ಹೊಲಕ್ಕೆ ನುಗ್ಗಿದ ಬಸ್   

ಚಿತ್ತಾಪುರ (ಕಲಬುರಗಿ): ಚಾಲಕನ ನಿಯಂತ್ರಣ ತಪ್ಪಿ ಸ್ತಳೀಯ ಬಸ್ ಬಸ್ ಘಟಕದ ಬಸ್ಸೊಂದು ರಸ್ತೆಯಿಂದ ಕೆಳಗಿಳಿದು ಹೊಲಕ್ಕೆ ನುಗ್ಗಿದ ಘಟನೆ ಬುಧವಾರ ಬೆಳಗ್ಗೆ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿ‌‌ ಸಂಭವಿಸಿದೆ.

ಚಿತ್ತಾಪುರದಿಂದ ಕಲಬುರಗಿ ನಗರಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್‌ನಲ್ಲಿ ಪ್ರಯಾಣಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ವೇಗವಾಗಿ ಚಲಿಸುತ್ತಿದ್ದ ಬಸ್ ಬಲಕ್ಕೆ ರಸ್ತೆಯ ಕೆಳಗಿಳಿದು ಹೊಲಕ್ಕೆ ನುಗ್ಗಿದೆ. ಮಳೆಯಿಂದ ಜಮೀನು ಕೆಸರು ಗದ್ದೆಯಂತ್ತಾಗಿ ಬಸ್ಸಿನ ಚಕ್ರಗಳು ಮುಂದಕ್ಕೆ ಚಲಿಸದಂತ್ತಾಗಿ ನಿಂತಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ತಾಲ್ಲೂಕಿನ ದಂಡೋತಿ ಗ್ರಾಮದ ಸಮೀಪದ ಪ್ರವಾಹದಿಂದ ತುಂಬಿ ಹರಿಯುವ ಕಾಗಿಣಾ ನದಿ ಬಳಿಯ ತಿರುವಿನಲ್ಲಿ ಈ ಘಟನೆ ಜರುಗಿದೆ. ಒಂದು ವೇಳೆ ಕೆಲವೇ ಕ್ಷಣಗಳ ನಂತರ ಈ ದುರ್ಘಟನೆ ಘಟಿಸಿದರೇ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ರಸ್ತೆಗಿಂತ ಎತ್ತರವಿರುವ ಜಮೀನಿಗೆ ಬಸ್ ನುಗ್ಗಿದ್ದರಿಂದ ಬಸ್‌ನ ವೇಗ ಹತೋಟಿಗೆ ಬಂದಿದೆ. ಒಂದು ವೇಳೆ ತಗ್ಗು ಪ್ರದೇಶವಿದ್ದರೆ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರು.

ಬಸ್ ಓಡಿಸುತ್ತಿರುವಾಗ ಸ್ಟೇರಿಂಗ್ ಕಂಬಿ ತುಂಡಾಗಿ ಬಸ್‌ ಮೇಲಿನ ನಿಯಂತ್ರಣ ತಪ್ಪಿದೆ. ಇದರಿಂದ ಹೊಲಕ್ಕೆ ನುಗ್ಗಿದೆ ಎಂದು ಬಸ್ ಚಾಲಕ ಹೇಳಿದರು.

ಬಸ್ ಸ್ಟೇರಿಂಗ್ ಕಂಬಿ ತುಂಡಾಗದೆ ಸುರಕ್ಷಿತವಾಗಿದೆ ಎಂದು ಘಟನಾ ಸ್ಥಳಕ್ಕೆ ಆಗಮಿಸಿದ್ದ ಮೆಕ್ಯಾನಿಕ್ ಒಬ್ಬರು ಹೇಳಿದರು.

ಬಸ್ ಘಟಕದ ಎಂಜಿನಿಯರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗಲೇ ನಿಖರ ಕಾರಣ ಗೊತ್ತಾಗಲಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.