ಚಿತ್ತಾಪುರ: ಗುರುವಾರ ರಾತ್ರಿಯಿಂದ ಶುಕ್ರವಾರ ದಿನವಿಡೀ ನಿರಂತರ ಸುರಿದ ಮಳೆಗೆ ಚಿತ್ತಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಜನರು ಮನೆಯ ಹೊರಗೆ ಬಾರದಂತೆ ಸುರಿದ ಮಳೆಯಿಂದ ಬೆಳಗ್ಗೆ ಜೀವನಾವಶ್ಯಕ ಸಾಮಾಗ್ರಿ ಖರೀದಿಸಲು, ದೈನಂದಿನ ಜೀವನಕ್ಕೆ ತೀವ್ರ ಅಡಚಣೆ ಉಂಟಾಯಿತು. ಪಟ್ಟಣದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಸುರಿಯುವ ಮಳೆಯಲ್ಲಿಯೆ ಶಾಲಾ ಕಾಲೇಜಿಗೆ ಹೋಗಿ ಬರಲು ತೀವ್ರ ತೊಂದರೆ ಅನುಭವಿಸಿದರು. ಮಳೆಯಿಂದ ಜಮೀನುಗಳು ನೀರುಮಯವಾಗಿವೆ. ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಕೃಷಿ ಕೂಲಿಕಾರ್ಮಿಕರು ಕೆಲಸ ಇಲ್ಲವಾಗಿದೆ. ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ತಣ್ಣನೆಯ ಗಾಳಿ ಬೀಸುತ್ತಿದೆ. ದಮ್ಮುಕೆಮ್ಮು, ಅಸ್ತಮಾ ರೋಗಿಗಳು ಮನೆಯ ಹೊರಗೆ ಬಾರದ ಸ್ಥಿತಿ ಉಂಟಾಗಿದೆ.
ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ: ಚಿತ್ತಾಪುರ ಪಟ್ಟಣದ ಬಹಾರಪೇಠ, ಗುಂಡಗುರ್ತಿ, ಬಳವಡಗಿ ಗ್ರಾಮಗಳಲ್ಲಿ ಮಳೆ, ಪ್ರವಾಹ ನೀರು ನುಗ್ಗಿ ಜನರು ತೊಂದರೆಗೊಳಗಾಗಿದ್ದರು. ಹೀಗಾಗಿ ಸಂತ್ರಸ್ತರಿಗಾಗಿ ಲೋಕಸಭೆ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಕಳುಹಿಸಿದ್ದ 500 ಆಹಾರ ಕಿಟ್‌ಗಳನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗು ಕಲ್ಲಕ್ ಅವರು ಪಟ್ಟಣದ ಬಹಾರಪೇಠದಲ್ಲಿ ವಿತರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.