ಚಿತ್ತಾಪುರ: ‘ಪ್ರತಿಷ್ಠಿತ ಸಂಸ್ಥೆಗಳಲ್ಲಿ ದಾಖಲಾತಿ ಮತ್ತು ಹೆಚ್ಚು ಹಣ ಖರ್ಚು ಮಾಡುವುದರಿಂದ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಮನಸ್ಥಿತಿಯಿಂದ ಮಕ್ಕಳ ಪಾಲಕರು ಹೊರಬರಬೇಕು’ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ವಿಶ್ವಗುರು ಶಿಕ್ಷಣ ಸಂಸ್ಥೆಯ ಮಹಾದೇವಮ್ಮ ಬಿ. ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕಲಬುರಗಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ನಮ್ಮ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ವ್ಯತ್ಯಾಸವಿದೆ. ಅಂತಹ ಪ್ರತಿಷ್ಠಿತ ಸಂಸ್ಥೆಗಳಿಗಿಂತ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ದುಬಾರಿ ಹಣ ಕೊಟ್ಟು ಮಕ್ಕಳ ಶಿಕ್ಷಣ ಕೊಡಿಸಲು ಕಲಬುರಗಿಯತ್ತ ಮುಖ ಮಾಡುವ ಮಕ್ಕಳು ಮತ್ತು ಅವರ ಪಾಲಕರು ಅರಿತುಕೊಳ್ಳಬೇಕು’ ಎಂದು ಹೇಳಿದರು.
‘ಶಿಕ್ಷಣವು ಪಾಲಕರ ಮನಸ್ಥಿತಿ, ಮಕ್ಕಳ ಆಸಕ್ತಿ, ಶಿಕ್ಷಕರ ಪ್ರೋತ್ಸಾಹ ಪ್ರೇರಣೆ ಮತ್ತು ಮಕ್ಕಳ ಕಾಳಜಿಯಿಂದ ಸಾಕಾರಗೊಳ್ಳುತ್ತದೆ. ತರಗತಿಗಳಲ್ಲಿ ಉಪನ್ಯಾಸಕರು ಮಕ್ಕಳ ಮನಸ್ಥಿತಿಗೆ ಅನುಗುಣವಾಗಿ ಬೋಧನೆ ಮಾಡಬೇಕು. ಸರಿಯಾಗಿ ಅರ್ಥವಾಗುವಂತೆ, ವಿಷಯ ಮನನ ಆಗುವಂತೆ ತಿಳಿಸಿ ಹೇಳಬೇಕು’ ಎಂದು ಹೇಳಿದರು.
‘ಬಡ, ಮಧ್ಯಮ ವರ್ಗದ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆಯೇ ಹೊರತು ಹಣ ಗಳಿಸಲು ಅಲ್ಲ. ವಿದ್ಯಾರ್ಥಿಗಳ ಓದು ಬರಹಕ್ಕೆ ಮತ್ತು ಬೋಧನೆಗೆ ಅಗತ್ಯವಾಗಿರುವ ಎಲ್ಲ ಮೂಲಸೌಲಭ್ಯ, ಪಾಠ ಮತ್ತು ಪೀಠೋಪಕರಣ, ಪ್ರಯೋಗಾಲಯ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗಿದೆ. ಆದರೆ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯತ್ತ ಮುಖ ಮಾಡುತ್ತಾರೆ. ಹೆಚ್ಚು ಅಂಕ ಪಡೆದವರು ಕಲಬುರಗಿಯತ್ತ ಮುಖ ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಾದ ಶಿರೀಷಾ, ಶೀಲಾ, ನಂದಿನಿ, ಉಮಾದೇವಿ, ಮಧುಸೂಸನ ರೆಡ್ಡಿ, ಶ್ವೇತಾ, ವಿಜಯಲಕ್ಷ್ಮಿ ಅವರನ್ನು ಸಂಸ್ಥೆಯ ವತಿಯಿಂದ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಅವರು ಸನ್ಮಾನಿಸಿ, ಸಿಹಿ ವಿತರಿಸಿ ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ಕಲಶೆಟ್ಟಿ, ಉಪನ್ಯಾಸಕರಾದ ನಾಗರಾಜ, ತ್ರೀವೇಣಿ, ಜ್ಯೋತಿ, ಪಾಲಕ ಸಾಯಬಣ್ಣಾ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.