ADVERTISEMENT

ಚಿತ್ತಾಪುರ | ಆರ್‌ಎಸ್‌ಎಸ್‌ ಪಥಸಂಚಲನ ಇಂದು: ಕಟ್ಟೆಚ್ಚರ

ಚಿತ್ತಾಪುರ: ಬಂದೋಬಸ್ತ್‌ಗೆ 1,200 ಪೊಲೀಸ್‌ ಸಿಬ್ಬಂದಿ ನಿಯೋಜನೆ; ಸಿಸಿಟಿವಿ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:15 IST
Last Updated 16 ನವೆಂಬರ್ 2025, 4:15 IST
ಭಾನುವಾರ ಆರ್‌ಎಸ್‌ಎಸ್‌ ಪಥಸಂಚಲನ ನಡೆಯಲಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಪೊಲೀಸರು ಶನಿವಾರ ಪಥಸಂಚಲನ ನಡೆಸಿದರು
ಭಾನುವಾರ ಆರ್‌ಎಸ್‌ಎಸ್‌ ಪಥಸಂಚಲನ ನಡೆಯಲಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಪೊಲೀಸರು ಶನಿವಾರ ಪಥಸಂಚಲನ ನಡೆಸಿದರು   

ಚಿತ್ತಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಟ್ಟಣದಲ್ಲಿ ಭಾನುವಾರ (ನ.16) ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಡೆಯಲಿರುವ ಗಣವೇಷಧಾರಿಗಳ ಪಥಸಂಚಲನ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆ ಹಾಗೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಹೆಚ್ಚುವರಿ ಎಸ್‌ಪಿ–1, ಡಿವೈಎಸ್‌ಪಿ–5, ಸಿಪಿಐ–18, ಪಿಎಸ್ಐ–51, ಎಎಸ್ಐ–110, ಕಾನ್‌ಸ್ಟೆಬಲ್–501, ಹೋಮ್‌ಗಾರ್ಡ್–250, ಕೆಎಸ್ಆರ್‌ಪಿ ತುಕಡಿ–8, ಡಿಎಆರ್ ತುಕಡಿ–6, ಬಿಡಿಎಸ್–1, ಎಎಸ್‌ಸಿ–1 ತುಕಡಿ ಸೇರಿ ಒಟ್ಟು 1,200 ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ADVERTISEMENT

ಆರ್‌ಎಸ್ಎಸ್ ಪಥಸಂಚಲನ ಸಾಗುವ ಮಾರ್ಗದಲ್ಲಿ ಪುರಸಭೆ–12, ಪೊಲೀಸ್ ಇಲಾಖೆಯಿಂದ 44 ಸಿಸಿಟಿವಿ ಕ್ಯಾಮೆರಾ ಅಳವಡಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪಥಸಂಚಲನ ಸಾಗುವ ಸಮಯದಲ್ಲಿ ಹತ್ತು ಡ್ರೋನ್‌ ಕ್ಯಾಮೆರಾಗಳು ದೃಶ್ಯ ಸೆರೆ ಹಿಡಿದು ನಿಗಾ ವಹಿಸಲಿವೆ. ಸಮಗ್ರ ದೃಶ್ಯ ಸೆರೆ ಹಿಡಿಯಲೆಂದು ವಿಡಿಯೊ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪೊಲೀಸ್ ಪಥಸಂಚಲನ: ಪಟ್ಟಣದಲ್ಲಿ ಭಾನುವಾರ ಆರ್‌ಎಸ್ಎಸ್ ಪಥಸಂಚಲನ ನಡೆಯುವುದರಿಂದ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗದಿರಲಿ ಮತ್ತು ಶಾಂತಿ ಕಾಪಾಡಲು ನಾವು ಸಿದ್ಧರಾಗಿದ್ದೇವೆ ಎಂದು ಜನರಿಗೆ ಭರವಸೆ ನೀಡಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಹನ ಸಮೇತ ಶನಿವಾರ ಸಂಜೆ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.

ಶಾಂತಿ ಕಾಪಾಡಲು ಸಿದ್ಧವಾಗಿರುವ ಪೊಲೀಸ್‌ ಪಡೆ  ಹೆಜ್ಜೆ ಹೆಜ್ಜೆಗೂ ಕ್ಯಾಮೆರಾ ಕಣ್ಣು  ಖಾಕಿ ಪಡೆ ಕಂಡು ಹೌಹಾರಿದ ಚಿತ್ತಾಪುರದ ಜನ

ಧ್ವಜ ಕಟ್ಟಲು ಅನುಮತಿ ಆರ್‌ಎಸ್ಎಸ್ ಪಥಸಂಚಲನ ನಡೆಯುವ ಮಾರ್ಗದಲ್ಲಿ ನ.15ರಂದು ಬೆಳಿಗ್ಗೆ 10 ಗಂಟೆಯಿಂದ ನ.16ರ ಸಂಜೆ 7 ಗಂಟೆಯವರೆಗೆ ಮಾತ್ರ ಒಟ್ಟು 200 ಧ್ವಜ ಮತ್ತು ಬಂಟಿಂಗ್ಸ್ ಫ್ಲೆಕ್ಸ್ ಕಟ್ಟಲು ಪುರಸಭೆ ಅನುಮತಿ ನೀಡಿದೆ.

350 ಗಣವೇಷಧಾರಿ ಭಾಗಿ ಹೈಕೋರ್ಟ್‌ ಕಲಬುರಗಿ ಪೀಠದ ನಿರ್ದೇಶನ ಹಾಗೂ ತಾಲ್ಲೂಕು ಆಡಳಿತದ ಷರತ್ತುಗಳಿಗೆ ಒಳಪಟ್ಟು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 300 ಜನ ಗಣವೇಷಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರು ಸೇರಿ 350 ಜನರು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಇತಿಹಾಸದಲ್ಲಿ ಮೊದಲ ಸಲ: ಆರ್‌ಎಸ್ಎಸ್ ಪಥಸಂಚಲನಕ್ಕೆ ಕಲ್ಪಿಸಿರುವ ಪೊಲೀಸ್ ಭದ್ರತೆ ಕಂಡು ಪಟ್ಟಣದ ಹಾಗೂ ತಾಲ್ಲೂಕಿನ ಗ್ರಾಮೀಣ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ‘ಒಂದು ಕಾರ್ಯಕ್ರಮಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಪೊಲೀಸರು ಚಿತ್ತಾಪುರಕ್ಕೆ ಆಗಮಿಸಿದ್ದು ನಮ್ಮ ಜೀವನದಲ್ಲಿ ಕಂಡೇ ಇಲ್ಲ. ಚಿತ್ತಾಪುರದ ಇತಿಹಾಸದಲ್ಲಿಯೇ ಇದು ಮೊದಲು’ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.