ಕಲಬುರಗಿ: ‘ದಲಿತ ಚಳವಳಿಯ ಬೀಜ ಬಿತ್ತಿದ ದಿ. ಪ್ರೊ. ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನದ ನೆನಪಿನಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಸಮೀಪದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೂನ್ 9ರಂದು ನಾಗರಿಕ ಹಕ್ಕುಗಳ ರಕ್ಷಣಾ ದಿನವನ್ನಾಗಿ ಆಚರಿಸಲಾಗುವುದು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
‘1974ರಲ್ಲಿ ಬಿ.ಕೃಷ್ಣಪ್ಪ ಅವರು ಭದ್ರಾವತಿಯಲ್ಲಿ ದಲಿತ ಚಳವಳಿಯ ಸಸಿ ನೆಟ್ಟರು. ಬಳಿಕ ದಲಿತ ಚಳಿವಳಿ ಜಾತಿ, ಧರ್ಮಗಳ ಭೇದವಿಲ್ಲದೇ ದಮನಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಾಗರಿಕ ಹಕ್ಕುಗಳ ರಕ್ಷಣಾ ದಿನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹಾದೇವಪ್ಪ ಸೇರಿದಂತೆ ನಾಡಿನ ಚಿಂತಕರನ್ನು ಆಹ್ವಾನಿಸಲಾಗುತ್ತಿದೆ. ದಲಿತ ಸಂಘರ್ಷ ಸಮಿತಿಯ 30 ಜಿಲ್ಲೆಗಳ ಪದಾಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬಳಸಿದ ಭಾಷೆ ಖಂಡನೀಯ. ಭಿನ್ನಾಭಿಪ್ರಾಯಗಳೇ ಪ್ರಜಾಪ್ರಭುತ್ವದ ಸೌಂದರ್ಯ. ಆದರೆ, ಟೀಕೆಗಳು ಬೀದಿ ಜಗಳ ಆಗಬಾರದು. ಕೀಳು ರಾಜಕಾರಣ ಬಿಟ್ಟು ಮುತ್ಸದ್ದಿತನ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಅಕ್ಷಮ್ಯ ಅಪರಾಧ. ಇದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು (ಸಿಆರ್‌ಇ ಸೆಲ್) ಸ್ಥಾಪಿಸಿರುವುದು ಸಾಗತಾರ್ಹ. ಈ ಠಾಣೆಗಳಿಗೆ ಸರ್ಕಾರ ಅಗತ್ಯ ಮೂಲಸೌಕರ್ಯ ಹಾಗೂ ಸಿಬ್ಬಂದಿಯನ್ನು ನೀಡಲು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಅರ್ಜುನ ಗೊಬ್ಬೂರ, ವಿಭಾಗೀಯ ಸಂಘಟನಾ ಸಂಚಾಲಕ ಗೋಪಾಲ ರಾಂಪೂರೆ, ಜಿಲ್ಲಾ ಸಂಚಾಲಕ ಸಂಜೀವಕುಮಾರ ಜವಳಕರ, ಮುಖಂಡರಾದ ಸೋಮಶೇಖರ ಬೆಡಕಪಳ್ಳಿ, ರಾಮಣ್ಣ ಕಲ್ಲದೇವರಹಳ್ಳಿ, ನಾಗಣ್ಣ ಬಡಿಗೇರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.