ADVERTISEMENT

ಕಾರ್ಮಿಕರ ಸೇವೆಗೆ ‘ಸಂಚಾರಿ’ ಕ್ಲಿನಿಕ್‌ ಸಜ್ಜು

ಜಿಲ್ಲೆಗೆ ಐದು ವಾಹನಗಳ ಮಂಜೂರು; ಚಿತ್ತಾಪುರ, ಕಲಬುರಗಿಯಲ್ಲಿ ಒಂದೊಂದು ವಾಹನ ಸೇವೆಗೆ ಅಣಿ

ಬಸೀರ ಅಹ್ಮದ್ ನಗಾರಿ
Published 31 ಮೇ 2025, 5:48 IST
Last Updated 31 ಮೇ 2025, 5:48 IST
ಕಲಬುರಗಿ ಕಾರ್ಮಿಕ ವೃತ್ತದ ಸಂಚಾರಿ ಆರೋಗ್ಯ ಘಟಕದೊಂದಿಗೆ ವಾಹನ ಸಿಬ್ಬಂದಿ ಇದ್ದಾರೆ
ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿ ಕಾರ್ಮಿಕ ವೃತ್ತದ ಸಂಚಾರಿ ಆರೋಗ್ಯ ಘಟಕದೊಂದಿಗೆ ವಾಹನ ಸಿಬ್ಬಂದಿ ಇದ್ದಾರೆ ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ಜಿಲ್ಲೆಯ ಕಾರ್ಮಿಕರು ಇನ್ಮುಂದೆ ಆರೋಗ್ಯ ಸೇವೆ ಅರಸಿ ಕ್ಲಿನಿಕ್‌ಗಳಿಗೆ ಅಲೆಯಬೇಕಿಲ್ಲ. ತಪಾಸಣೆಗೆ ಹಣ ವೆಚ್ಚ ಮಾಡಬೇಕಿಲ್ಲ. ಪ್ರಯೋಗಾಲಯದ ಪರೀಕ್ಷಾ ವರದಿ ಪಡೆಯುವ ತ್ರಾಸೂ ಇಲ್ಲ. ಈ ಎಲ್ಲ ಸೇವೆ ನೀಡಲು ಸಂಚಾರಿ ಆರೋಗ್ಯ ಘಟಕವೇ ಶೀಘ್ರ ಕಾರ್ಮಿಕರನ್ನು ಅರಸಿ ಬರಲಿದೆ! 

ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಇಂಥದ್ದೊಂದು ‘ಸಂಚಾರಿ ಆರೋಗ್ಯ ಘಟಕ’ ಸಿದ್ಧಪಡಿಸಲಾಗಿದೆ. ಎಂಬಿಬಿಎಸ್‌ ವೈದ್ಯ, ಜಿಎನ್ಎಂ, ಫಾರ್ಮಾಸಿಸ್ಟ್‌, ಲ್ಯಾಬ್‌ ಟೆಕ್ನಿಷಿಯನ್‌, ಎಎನ್‌ಎಂ ಹಾಗೂ ಚಾಲಕ ಸೇರಿ ಆರು ಸಿಬ್ಬಂದಿ ಇದರಲ್ಲಿ ಇರಲಿದ್ದಾರೆ. ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ತೆರಳಿ, ಅವರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವುದು ಈ ಸಂಚಾರಿ ಆರೋಗ್ಯ ಘಟಕದ ಉದ್ದೇಶ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಐದು ಕಾರ್ಮಿಕ ವೃತ್ತಗಳಿದ್ದು, ಪ್ರತಿ ವೃತ್ತಕ್ಕೆ ಒಂದರಂತೆ ಜಿಲ್ಲೆಗೆ ಐದು ಸಂಚಾರಿ ಆರೋಗ್ಯ ಘಟಕ ವಾಹನಗಳು ಮಂಜೂರಾಗಿವೆ.

ADVERTISEMENT

ಆ ಪೈಕಿ ಚಿತ್ತಾಪುರ, ಶಹಾಬಾದ್‌ ಹಾಗೂ ಕಾಳಗಿ ತಾಲ್ಲೂಕು ಒಳಗೊಂಡ ಚಿತ್ತಾಪುರ ವೃತ್ತಕ್ಕೆ ಒಂದು ವಾಹನ ಹಾಗೂ ಕಲಬುರಗಿ ತಾಲ್ಲೂಕು (ಭಾಗಶಃ) ಹಾಗೂ ಕಮಲಾಪುರ ತಾಲ್ಲೂಕು ವ್ಯಾಪ್ತಿ ಒಳಗೊಂಡ ಎಸ್‌ಎಲ್‌ಐ–1(ಹಿರಿಯ ಕಾರ್ಮಿಕ ನಿರೀಕ್ಷಕ) ವೃತ್ತಕ್ಕೆ ಮತ್ತೊಂದು ವಾಹನ ಈಗಾಗಲೇ ಬಂದಿದೆ. 

ಸೇಡಂ ಹಾಗೂ ಚಿಂಚೋಳಿ ತಾಲ್ಲೂಕು ವ್ಯಾಪ್ತಿ ಒಳಗೊಂಡ ಸೇಡಂ ವೃತ್ತ, ಕಲಬುರಗಿ ತಾಲ್ಲೂಕು (ಭಾಗಶಃ), ಆಳಂದ ತಾಲ್ಲೂಕು ಹಾಗೂ ಅಫಜಲಪುರ ತಾಲ್ಲೂಕು ವ್ಯಾಪ್ತಿ ಒಳಗೊಂಡ ಎಸ್‌ಎಲ್‌ಐ–2 ವೃತ್ತ, ಕಲಬುರಗಿ ತಾಲ್ಲೂಕು (ಭಾಗಶಃ), ಜೇವರ್ಗಿ ತಾಲ್ಲೂಕು ಹಾಗೂ ಯಡ್ರಾಮಿ ತಾಲ್ಲೂಕು ವ್ಯಾಪ್ತಿ ಒಳಗೊಂಡ ಎಸ್‌ಎಲ್‌ಐ–3 ವೃತ್ತಕ್ಕೆ ಇನ್ನೊಂದು ವಾರದಲ್ಲಿ ಸಂಚಾರಿ ಆರೋಗ್ಯ ವಾಹನಗಳು ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸದ್ಯ 97 ಸಾವಿರ ‌ಸಕ್ರಿಯ ಕಾರ್ಮಿಕ ಕಾರ್ಡ್‌ಗಳಿವೆ. 1.40 ಲಕ್ಷದಷ್ಟು ಕಾರ್ಮಿಕ ಕಾರ್ಡ್‌ಗಳು ಬಫರ್‌ ಜೋನ್‌ನಲ್ಲಿವೆ. ಈ ಕುಟುಂಬಗಳ ಸದಸ್ಯರಿಗೆ ಈ ಸಂಚಾರಿ ಆರೋಗ್ಯ ಘಟಕದಿಂದ ಸೇವೆ ಉಚಿತವಾಗಿ ದೊರೆಯಲಿದೆ.

ಸಂಚಾರಿ ಆರೋಗ್ಯ ಘಟಕದಲ್ಲಿ ಕಾರ್ಮಿಕರೊಬ್ಬರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು. ಸಿಬ್ಬಂದಿ ಇದ್ದಾರೆ  –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಗೆ ಬಂದಿರುವ ಸಂಚಾರಿ ಆರೋಗ್ಯ ಘಟಕದ ಹೊರ ನೋಟ –ಪ್ರಜಾವಾಣಿ ಚಿತ್ರ

ಸುಸಜ್ಜಿತ ವಾಹನ ಅತ್ಯಾಧುನಿಕ ಸೌಲಭ್ಯ

ಸಾರಿಗೆ ಬಸ್‌ ಹೋಲುವ ಈ ಸಂಚಾರಿ ಆರೋಗ್ಯ ಘಟಕದಲ್ಲಿ ಸುಸಜ್ಜಿತ ಕ್ಲಿನಿಕ್‌ನಲ್ಲಿ ದೊರೆಯುವ ಎಲ್ಲ ಸೌಲಭ್ಯಗಳೂ ಇವೆ. ತಪಾಸಣೆ ಚಿಕಿತ್ಸೆ ಪ್ರಯೋಗಾಲಯ ವಿಭಾಗ ಈ ಘಟಕದಲ್ಲಿದೆ. ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿದೆ. ಎರಡು ಎ.ಸಿಗಳ ಜೊತೆಗೆ ಕಿರು ಫ್ಯಾನ್‌ಗಳೂ ಇವೆ. 25 ವೈದ್ಯಕೀಯ ಉಪಕರಣ 5 ಪ್ರಯೋಗಾಲಯದ ಉಪಕರಣ 37 ವಿಧದ ವೈದ್ಯಕೀಯ ಬಳಕೆ ವಸ್ತುಗಳು ವಾಹನದಲ್ಲಿವೆ. ಸಿಬ್ಬಂದಿಗೆ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆಯೂ ಇದೆ. ಪ್ರಯೋಗಾಲಯದ ವರದಿಗಳನ್ನು ರವಾನಿಸಲು ಅತ್ಯಾಧುನಿಕ ಲ್ಯಾಪ್‌ಟಾಪ್‌ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಎಡಬದಿಗೆ ಟಿ.ವಿ ಅಳವಡಿಸಲಾಗಿದೆ. ಮೆಡಿಸಿನ್‌ ಇನ್ನಷ್ಟೇ ಬರಬೇಕಿದ್ದು ರೂಟ್‌ಮ್ಯಾಪ್‌ ಕೂಡ ಅಂತಿಮಗೊಳಿಸಬೇಕಿದೆ.

‘ವಾಹನದಲ್ಲೇ ಚಿಕಿತ್ಸೆಗೆ ಅವಕಾಶ’

‘ಕಾರ್ಮಿಕರಿಗೆ ವಾಹನದಲ್ಲೇ ಸಂಪೂರ್ಣ ತಪಾಸಣೆ ಚಿಕಿತ್ಸೆ ನೀಡುವಂತೆ ರೂಪಿಸಲಾಗಿದೆ. ಕೋವಿಡ್‌ ಮಧುಮೇಹ ರಕ್ತದೊತ್ತಡ ಕಣ್ಣಿನ ಪರೀಕ್ಷೆ ರಕ್ತಪರೀಕ್ಷೆ ಇಸಿಜಿ ಸೇರಿದಂತೆ ಹೃದಯ ಸಂಬಂಧಿತ ಕಿಡ್ನಿ ಸಂಬಂಧಿತ ಮೂತ್ರ ಸೋಂಕು ಸೇರಿದಂತೆ ಹತ್ತಾರು ಬಗೆಯ ರೋಗಗಳ ತಪಾಸಣೆಗೆ ವಾಹನದಲ್ಲಿ ಸೌಲಭ್ಯಗಳಿವೆ’ ಎನ್ನುತ್ತಾರೆ ಸಂಚಾರಿ ಆರೋಗ್ಯ ಘಟಕದ ವೈದ್ಯ ಡಾ.ರಿಯಾಜ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.