ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 5 ಸಾವಿರ ಕೋಟಿ: ಸಿಎಂ ಬೊಮ್ಮಾಯಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 10:16 IST
Last Updated 17 ಸೆಪ್ಟೆಂಬರ್ 2022, 10:16 IST
ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಭೀಮಾ ಪಲ್ಸ್' ಬ್ರಾಂಡ್ ನ ತೊಗರಿಯನ್ನು ಮಾರುಕಟ್ಟೆಗೆ ಬಿಡುಗಡೆ ‌ಮಾಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ದತ್ತಾತ್ರೇಯ ‌ಪಾಟೀಲ ರೇವೂರ, ರಾಜಕುಮಾರ ಪಾಟೀಲ‌ ತೇಲ್ಕೂರ, ಬಸವರಾಜ ಮತ್ತಿಮಡು ಇದ್ದರು.
ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 'ಭೀಮಾ ಪಲ್ಸ್' ಬ್ರಾಂಡ್ ನ ತೊಗರಿಯನ್ನು ಮಾರುಕಟ್ಟೆಗೆ ಬಿಡುಗಡೆ ‌ಮಾಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ದತ್ತಾತ್ರೇಯ ‌ಪಾಟೀಲ ರೇವೂರ, ರಾಜಕುಮಾರ ಪಾಟೀಲ‌ ತೇಲ್ಕೂರ, ಬಸವರಾಜ ಮತ್ತಿಮಡು ಇದ್ದರು.   

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಬಜೆಟ್‌ನಲ್ಲಿ ಕೆಕೆಆರ್ ಡಿಬಿಗೆ ನೀಡುತ್ತಿರುವ ಅನುದಾನವನ್ನು ₹ 3 ಸಾವಿರದಿಂದ ₹ 5 ಸಾವಿರ ‌ಕೋಟಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸ್ಥಳೀಯ ಶಾಸಕ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹ 3 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ‌ಕಾಮಗಾರಿಗಳಿಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.

ಈ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ‌ ಬದ್ಧವಾಗಿದ್ದು, ಮಾರ್ಚ್ 31ರೊಳಗಾಗಿ ಈ ಭಾಗದ 5 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 11 ಸಾವಿರ ಹುದ್ದೆಗಳನ್ನೂ ಮಾರ್ಚ್ ಅಂತ್ಯದೊಳಗೆ ಭರ್ತಿ ಮಾಡಲಾಗುವುದು ಎಂದು ಘೋಷಿಸಿದರು.

ADVERTISEMENT

ನಾರಾಯಣಪುರ ಬಲದಂಡೆ ಯೋಜನೆಯ ಕಾಲುವೆಗಳು ಹಾಳಾಗಿದ್ದು, ಕೊನೆಯವರೆಗೂ ನೀರು ತಲುಪುತ್ತಿಲ.‌ ಕಾಲುವೆಗಳ ಸುಧಾರಣೆಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಖರ್ಗೆ ಯತ್ನ ಶ್ಲಾಘಿಸಿದ ಬೊಮ್ಮಾಯಿ...

ಕಲ್ಯಾಣ ಕರ್ನಾಟಕಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿಟ್ಟಿ‌ನಲ್ಲಿ 371 (ಜೆ) ಕಲಂ ಜಾರಿಗೆ ಒತ್ತಾಯಿಸಿ ಮೊದಲು ಹೋರಾಟ ‌ಮಾಡಿದವರು ದಿ. ವೈಜನಾಥ ಪಾಟೀಲರು. ಅದನ್ನು ಸಂಸತ್ತಿನಲ್ಲಿ ಮಂಡಿಸಿ ಎಲ್ಲರ ಒಪ್ಪಿಗೆ ಪಡೆದು ಕಾಯ್ದೆ ಜಾರಿಯಾಗುವಂತೆ ಮಾಡಿದವರು ಮಲ್ಲಿಕಾರ್ಜುನ ಖರ್ಗೆ ಅವರು. ಕೆಲಸ ಮಾಡಿದ್ದವರ ಬಗ್ಗೆ ಹೇಳಿಕೊಳ್ಳಬೇಕಾಗುತ್ತದೆ ಎಂದರು.

ಆದರೆ, ರಾಜ್ಯದಲ್ಲಿ ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದ ಸರ್ಕಾರ ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಯಿತು. ಹಿಂದಿ‌ನ ಸರ್ಕಾರ ಇತ್ತ ತಿರುಗಿಯೂ ನೋಡಲಿಲ್ಲ ಎಂದು ಟೀಕಿಸಿದರು.

ನವ ಕಲ್ಯಾಣ ಕರ್ನಾಟಕದಿಂದ ನವ ಕರ್ನಾಟಕ, ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಧ್ಯೇಯವಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಉತ್ಸವ ‌ದಿನವೇ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದೆ.‌ ಇಲ್ಲಿ‌ನ ಜನತೆಗೆ ನನ್ನ ಮೂಲಕ ಅವರು ಶುಭ ಸಂದೇಶ ಕಳಿಸಿದ್ದಾರೆ ಎಂದು ತಿಳಿಸಿದರು.

ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರು ಹೈದರಾಬಾದ್ ನಿಜಾಮರಿಂದ ಮುಕ್ತಿ ಕೊಡಿಸಿದರು. ಆಧುನಿಕ ಪಟೇಲ್ ರೂಪದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರ್ಯ ಪಡೆದ ಜನರ ಕಲ್ಯಾಣಕ್ಕೆ ಬದ್ದರಾಗಿ ಸಹಸ್ರಾರು ಕೋಟಿ ನೆರವು ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದಂತೆ ಆಧುನಿಕ ಬಸವಣ್ಣ ಬಸವರಾಜ ಬೊಮ್ಮಾಯಿ ಅವರು ಈ ಭಾಗಕ್ಕೆ ಶೈಕ್ಷಣಿಕ, ಆರೋಗ್ಯ ಸೌಲಭ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಶ್ಲಾಘಿಸಿದರು.

ರಾಯಚೂರಿಗೆ ಉನ್ನತ ಆರೋಗ್ಯ ‌ಸಂಸ್ಥೆ: ಮುಖ್ಯಮಂತ್ರಿ

ರಾಯಚೂರಿನಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯನ್ನು ಆರಂಭಿಸುವಂತೆ ಅಲ್ಲಿನ ಜನರು ಹೋರಾಟ ನಡೆಸುತ್ತಿರುವುದು ನನ್ನ ಗಮನದಲ್ಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಉನ್ನತ ಆರೋಗ್ಯ ಸಂಸ್ಥೆ ಮಂಜೂರಾಗಲಿದೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.