ADVERTISEMENT

ಜು 10ರಂದು ಬಿಎಸ್‌ವೈರಿಂದ ₹ 50 ಕೋಟಿ ಬೆಳೆಸಾಲ ವಿತರಣೆ

ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 15:18 IST
Last Updated 8 ಜುಲೈ 2021, 15:18 IST
ರಾಜಕುಮಾರ ಪಾಟೀಲ
ರಾಜಕುಮಾರ ಪಾಟೀಲ   

ಕಲಬುರ್ಗಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಇದೇ 10ರಂದು ನಗರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ 10 ಸಾವಿರ ರೈತರಿಗೆ ₹ 50 ಕೋಟಿ ಬೆಳೆಸಾಲ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಬ್ಯಾಂಕ್ ಸದೃಢವಾಗಿದ್ದು, ಸಾಲ ಕೇಳಿಕೊಂಡ ಬಂದ ಎಲ್ಲ ರೈತರಿಗೂ ಸಾಲ ನೀಡುವ ಸಂಕಲ್ಪ ಮಾಡಲಾಗಿದೆ. ₹ 50 ಸಾವಿರದಿಂದ ಗರಿಷ್ಠ ₹ 3 ಲಕ್ಷದವರೆಗೆ ಸಾಲ ನೀಡಲು ಉದ್ದೇಶಿಸಲಾಗಿದೆ. ಅಪೆಕ್ಸ್‌ ಬ್ಯಾಂಕ್ ₹ 200 ಕೋಟಿ ಸಾಲ ನೀಡಿದ್ದು, ಅದನ್ನು ರೈತರಿಗೆ ವಿತರಿಸಲಾಗುತ್ತಿದೆ. ನಬಾರ್ಡ್‌ನಿಂದ ₹ 450 ಕೋಟಿ ಸಾಲವನ್ನು ಪಡೆದುಕೊಂಡು 2 ಲಕ್ಷ ರೈತರಿಗೆ ಸಾಲ ನೀಡಲಾಗುವುದು. ಮಾರ್ಚ್‌ ವೇಳೆಗೆ ಒಟ್ಟು 3 ಲಕ್ಷ ಹೊಸ ಹಾಗೂ ಹಳೆಯ ಸದಸ್ಯರಿಗೆ ಸಾಲ ವಿತರಣೆ ಮಾಡಲು ಉದ್ದೇಶಿಸಲಾಗಿದೆ. 10 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ನೀಡಲಾಗುವುದು’ ಎಂದರು.

‘ಕಳೆದ ಎರಡು ವರ್ಷದಿಂದ ರೈತರಿಗೆ ಸಾಲ ಹಂಚದಿರುವುದನ್ನು ಮನಗಂಡು ನಾನು ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಸರ್ಕಾರದಿಂದ 10 ಕೋಟಿ ಷೇರು ತಂದಿದ್ದೇವೆ. ₹ 80 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಸುಸ್ತಿ ಸಾಲ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಲಾಗಿದ್ದು, ₹ 250 ಕೋಟಿ ಸಾಲದ ಪೈಕಿ ₹ 150 ಕೋಟಿ ವಸೂಲಿ ಮಾಡಲಾಗಿದೆ’ ಎಂದರು.

ADVERTISEMENT

‘ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಸುಧಾರಣೆ ಕ್ರಮದಿಂದ ರಾಜ್ಯದಲ್ಲಿ 21ನೇ ಸ್ಥಾನದಲ್ಲಿದ್ದ ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಈಗ 11 ನೇ ಸ್ಥಾನಕ್ಕೆ ಬಂದು ನಿಂತಿದೆ. 2022ರ ಮಾರ್ಚ್ ಅಂತ್ಯದೊಳಗೆ ಮೊದಲ ಮೂರರಲ್ಲಿ ಬರಲು ಶ್ರಮಿಸಲಾಗುವುದು ಎಂದು ಪ್ರಕಟಿಸಿದರು.

ಗ್ರಾಮ ಪಂಚಾಯಿತಿಗೊಂದು ಸಂಘ: ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಸಹಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. 4000 ಎಕರೆ ಭೂಮಿ 300 ರೈತರಿದ್ದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರಚನೆ ಮೂಲಕ ರೈತರಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ನಿರ್ದೇಶಕರಾದ ಶಿವಾನಂದ ಮಾನಕರ, ಶರಣಬಸಪ್ಪ ಪಾಟೀಲ ಅಷ್ಠಗಾ, ಚಂದ್ರಶೇಖರ ತಳ್ಳಳ್ಳಿ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಇದ್ದರು.

700 ಸದಸ್ಯರಿಗೆ ನೋಟಿಸ್

ಬ್ಯಾಂಕ್‌ನಿಂದ ಮಧ್ಯಮಾವಧಿ ಸಾಲ ಪಡೆದು ಕಟಬಾಕಿ ಉಳಿಸಿಕೊಂಡಿರುವ 700 ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಅಸಲು ₹ 40 ಕೋಟಿ ಹಾಗೂ ಬಡ್ಡಿ ₹ 40 ಕೋಟಿ ಸೇರಿ ₹ 80 ಕೋಟಿ ವಸೂಲಿ ಮಾಡಲು ದಿಟ್ಟ ಹೆಜ್ಜೆ ಇಡಲಾಗಿದೆ. ಬ್ಯಾಂಕ್‌ನಿಂದ ಮೂರು ನೋಟಿಸ್‌ ನೀಡಿದ ಬಳಿಕ ನಿಯಮಾನುಸಾರ ಸದಸ್ಯರು ಬ್ಯಾಂಕಿಗೆ ಅಡಮಾನ ಇಟ್ಟ ಆಸ್ತಿಗಳನ್ನು ಹರಾಜು ಹಾಕಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.