ಕಲಬುರಗಿಯಲ್ಲಿ ಶನಿವಾರ ನಡೆದ ‘ಮನೆ– ಮನೆಗೆ ಪೊಲೀಸ್ ವ್ಯವಸ್ಥೆ’ ಕಾರ್ಯಕ್ರಮವನ್ನು ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಉದ್ಘಾಟಿಸಿದರು. ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಸಾರ್ವಜನಿಕರು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟು ಖಾಕಿ ಪಡೆಗೆ ಕಣ್ಣು, ಕಿವಿ ಮತ್ತು ಬಾಯಿಯಾದರೆ ಪೊಲೀಸರಿಗೆ ಲಕ್ಷ ಜನರ ತೋಳ್ಬಲ ಬರುತ್ತದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.
ನಗರದ ಎಚ್‌ಕೆಇ ಸಂಸ್ಥೆಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಶನಿವಾರ ನಗರ ಪೊಲೀಸ್ ಕಮಿಷನರೇಟ್ ಆಯೋಜಿಸಿದ್ದ ‘ಮನೆ ಮನೆಗೆ ಪೊಲೀಸ್ ವ್ಯವಸ್ಥೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ರೈಮ್ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ತಮ್ಮ ಸುತ್ತಲಿನ ಸ್ಥಳದಲ್ಲಿ ಅಪರಾಧ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೆ ನಮಗೂ ಅನುಕೂಲ ಆಗುತ್ತದೆ’ ಎಂದು ಹೇಳಿದರು.
‘ಕಾನೂನುಬಾಹಿರ ಚಟುವಟಿಕೆ ತಡೆ, ಅಶಿಸ್ತು, ಸಂಚಾರ ನಿಯಮಗಳ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳ ದುರ್ಬಳಕೆಯನ್ನು ಕೇವಲ ಪೊಲೀಸರಿಂದ ಕಡಿವಾಣ ಹಾಕಲು ಆಗುತ್ತದೆಯಾ? ಎಲ್ಲಾ ಸಿಗ್ನಲ್‌ಗಳಲ್ಲಿ ನಿಂತು ಫೈನ್ ಹಾಕಿದರೂ ಜನರು ನಮ್ಮ ಬಗ್ಗೆ ಆಡಿಕೊಳ್ಳುತ್ತಾರೆ. ಇಂತಹುದಕ್ಕೆ ಅವಕಾಶ ಕೊಡದೆ ಸಾರ್ವಜನಿಕರೇ ನಿಯಮಗಳ ಪಾಲನೆ ಮಾಡಬೇಕು’ ಎಂದರು.
‘ಇಷ್ಟು ದಿನ ಸಾರ್ವಜನಿಕರಿಗೆ ಕಾನೂನಿನ ಪಾಲನೆ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ, ರಸ್ತೆ ನಿಯಮಗಳ ಅನುಸರಣೆಯ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದೇವೆ. ಇನ್ನು ಮುಂದೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
‘ಮನೆ– ಮನೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಯೇ ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಕಿವಿಯಾಗುತ್ತಾರೆ. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವಲ್ಲಿ ಮಹಿಳಾ ಸಿಬ್ಬಂದಿಯನ್ನು ಕಳುಹಿಸಲಾಗುವುದು. ಪೊಲೀಸರಿಗೆ ಸರಿಯಾಗಿ ಮಾಹಿತಿ ಕೊಟ್ಟವರಿಗೆ ಪ್ರಶಸ್ತಿಯೂ ನೀಡುತ್ತೇವೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ‘ಮನೆ– ಮನೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಪೊಲೀಸ್ ಸಿಬ್ಬಂದಿ ಮುಂದೆ ಇರಿಸಬಹುದು. ತಮ್ಮ ಪ್ರದೇಶದಲ್ಲಿನ ಸಮ್ಯಸೆಗಳಿಗೆ ತ್ವರಿತವಾಗಿ ಸ್ಪಂದನೆ ಸಿಗುತ್ತದೆ. ಸ್ನೇಹಪರವಾದ ಹಾಗೂ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗೆ ಹೊಸ ಅಸ್ತ್ರ ಸಿಕ್ಕಿದೆ. ಜನರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಸೆನ್’ ಠಾಣೆಯ ಎಸಿಪಿ ಮಡೋಳಪ್ಪ ಅವರು ‘ಸೈಬರ್ ಅಪರಾಧಗಳ ಅರಿವು ಮತ್ತು ಜಾಗೃತಿ’ ಹಾಗೂ ಎಸಿಪಿ ಚಂದ್ರಶೇಖರ ಅವರು ‘ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ’ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ತಮ್ಮ ಅಭಿಪ್ರಾಯ, ದೂರುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಸಿಪಿಗಳಾದ ಡಿ.ಜಿ. ರಾಜಣ್ಣ, ಶರಣಪ್ಪ ಸುಬೇದಾರ, ಮೊಹಮದ್ ಇಸ್ಮಾಯಿಲ್ ಶರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಿಸಿಪಿ ಪ್ರವೀಣ್ ನಾಯಕ್ ವಂದಿಸಿದರು.
ಲಾರಿ ತಂಗುದಾಣದಲ್ಲಿ ನಡೆಯುವ ಬ್ಯಾಟರಿ ಟೈರ್ ಕಳ್ಳತನದ ಕೃತ್ಯಗಳನ್ನು ತಡೆದರೆ ರಿಂಗ್ ರೋಡ್ ಬಳಿ ಲಾರಿ ನಿಲುಗಡೆ ತಪ್ಪುತ್ತದೆ.– ಕವಿತಾ ದೇಗಾಂವ, ಲಾರಿ ಮಾಲೀಕರು
ಮನೆ– ಮನೆಗೆ ಪೊಲೀಸ್ ವ್ಯವಸ್ಥೆಯ ಕಾರ್ಯಕ್ರಮವನ್ನು ಪಿಯು ಕಾಲೇಜಿಗಳಲ್ಲಿ ಹಮ್ಮಿಕೊಂಡು ಯುವಕರಿಗೂ ಕಾನೂನಿನ ಪಾಲನೆ ಬಗ್ಗೆ ಮಾಹಿತಿ ನೀಡಬೇಕು.– ಆರ್.ಬಿ.ಜಗದಾಳೆ, ನಿವೃತ್ತ ಪ್ರಾಚಾರ್ಯರ
‘50 ಜನರ ತಂಡ ಮನೆ– ಮನೆಗೆ ಭೇಟಿ’
‘40ರಿಂದ 50 ಸಿಬ್ಬಂದಿಯ ತಂಡವನ್ನು ರಚಿಸಲಾಗುವುದು. ಪ್ರತಿಯೊಂದು ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಪೊಲೀಸ್ ಸಿಬ್ಬಂದಿ ಆಲಿಸುವರು’ ಎಂದು ಡಿಸಿಪಿ ಕನಿಕಾ ಸಿಕ್ರಿವಾಲ್ ಹೇಳಿದರು. ‘ಮನೆಯಲ್ಲಿ ಯಾರೆಲ್ಲಾ ಇದ್ದಾರೆ? ಸುತ್ತಲಿನ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆಯಾ ಎಂಬೆಲ್ಲಾ ಮಾಹಿತಿ ಪಡೆಯುತ್ತಾರೆ. ಜನರು ಸಹ ಸಹಕರಿಸಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪ್ರತಿ ತಿಂಗಳ 2ನೇ ಶನಿವಾರ ಠಾಣೆ ಹಾಗೂ ಉಪ ವಿಭಾಗ ಹಂತದಲ್ಲಿ ಸಭೆ ನಡೆಯಲಿದ್ದು ಅಲ್ಲಿಗೆ ಬಂದು ತಾವು ಕೊಟ್ಟಿದ್ದರ ದೂರಿನ ಮಾಹಿತಿಯೂ ಪಡೆಯಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.