ADVERTISEMENT

ಜೈಲಲ್ಲಿ ಕಂಪ್ಯೂಟರ್‌ ಕಲಿತ ಕೈದಿಗಳು

ನೆಹರು ಕಾರಾಗೃಹದಲ್ಲಿಯೇ ಬರೆದಿದ್ದು ‘ಡಿಸ್ಕವರಿ ಆಫ್‌ ಇಂಡಿಯಾ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 5:12 IST
Last Updated 15 ಸೆಪ್ಟೆಂಬರ್ 2024, 5:12 IST
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಪ್ಯೂಟರ್‌ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಜೈಲರ್‌ಗಳಾದ ಪರಮಾನಂದ, ಶೈನಾಜ್‌, ಶಿಕ್ಷಕ ನಾಗರಾಜ್‌ ಮೂಲಗೆ ಹಾಜರಿದ್ದರು
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಪ್ಯೂಟರ್‌ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಜೈಲರ್‌ಗಳಾದ ಪರಮಾನಂದ, ಶೈನಾಜ್‌, ಶಿಕ್ಷಕ ನಾಗರಾಜ್‌ ಮೂಲಗೆ ಹಾಜರಿದ್ದರು   

ಕಲಬುರಗಿ: ಸರ್‌, ನಾನು ಪವರ್‌ಪಾಯಿಂಟ್‌ನಲ್ಲಿ ಪ್ರಜೆಂಟೇಶನ್‌ ಕೊಡ್ಲಾ ಎನ್ನುವ ನೀರಮಾನ್ವಿಯ ರಾಮಣ್ಣ. ನಾನು ಎಕ್ಸೆಲ್‌ನಲ್ಲಿ ವಿದ್ಯಾರ್ಥಿಗಳ ಮಾರ್ಕ್ಸ್‌ಶೀಟ್‌ ರೆಡಿ ಮಾಡ್ತೀನಿ ಎನ್ನುತ್ತಾನೆ ಮೈಂದರಗಿಯ ನಾಗರಾಜ. ನಾನು ರಕ್ತದಾನದ ಸರ್ಟಿಫಿಕೇಟ್‌ ರೆಡಿ ಮಾಡ್ಲಾ ಎಂದು ಕಂಪ್ಯೂಟರ್ ಮೌಸ್‌ ಕ್ಲಿಕ್‌ ಮಾಡಿಯೇ ಬಿಟ್ಟ ಬೀದರ್‌ನ ಜೀವನ್‌.

ಈ ರೀತಿಯ ಚಿತ್ರಣ ಕಂಡುಬಂದಿದ್ದು ಯಾವುದೋ ಕಂಪ್ಯೂಟರ್‌ ತರಬೇತಿ ಸೆಂಟರ್‌ನಲ್ಲಿ ಅಲ್ಲ, ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ.

‘ಜೈಲು ಎಂದರೆ ಶಿಕ್ಷೆಯ ಸ್ಥಳ. ಆದರೆ ಇದು ಕೈದಿಗಳ ಪರಿವರ್ತನೆ ಮತ್ತು ಪುನರ್ವಸತಿ ಕೇಂದ್ರವೂ ಹೌದು’ ಎನ್ನುತ್ತಾರೆ ಕಲಬುರಗಿ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ.

ADVERTISEMENT

ಅದಾನಿ ಗ್ರೂಪ್‌ನ ಸಕ್ಷಮ ಕೌಶಲ ತರಬೇತಿ ಕೇಂದ್ರ ಮತ್ತು ಶೃಂಗೇರಿ ಶಾರದಾ ಪೀಠದ ಸೋಕೇರ್‌ ಇಂಡ್‌ ಸಂಸ್ಥೆ ಸಹಯೋಗದಲ್ಲಿ ಕಂಪ್ಯೂಟರ್‌ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದುಡುಕಿ ಇಲ್ಲಿಗೆ ಬಂದಿದ್ದೀರಿ, ಆಗಿಹೋಗಿದ್ದಕ್ಕೆ ಪರಿತಪಿಸಬೇಡಿ. ಇಲ್ಲಿ ಸಿಗುವ ತರಬೇತಿ ಬಳಸಿಕೊಂಡು ಬದುಕು ರೂಪಿಸಿಕೊಳ್ಳಿ. ಜೈಲಲ್ಲಿದ್ದಾಗಲೇ ನೆಹರು ಡಿಸ್ಕವರಿ ಆಫ್‌ ಇಂಡಿಯಾ ಬರೆದರು’ ಎಂದು ಕಾರಾಗೃಹದ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್‌ ಡಾಂಗೆ ತಿಳಿಸಿದರು.

ಶೃಂಗೇರಿ ಶಾರದಾ ಪೀಠದ ಪ್ರತಿನಿಧಿ ಉಮೇಶ ಹರಿಹರ, ಸೋಕೇರ್‌ ಇಂಡ್‌ ಕಲಬುರಗಿ ಅಧ್ಯಕ್ಷ ಪ್ರಕಾಶ ಕುಲಕರ್ಣಿ, ಶೃಂಗೇರಿ ಮಠದಿಂದ ಹಮ್ಮಿಕೊಳ್ಳುವ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಿದರು.

ಅದಾನಿ ಗ್ರೂಪ್‌ನ ಸಕ್ಷಮ ತರಬೇತಿ ಕೇಂದ್ರದ ಅಶೋಕ್‌ಕುಮಾರ ಎಚ್‌. ಮಾತನಾಡಿ, ‘ಜಗತ್ತು ಕೌಶಲದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ನಿಮಗೆ ಕಂಪ್ಯೂಟರ್‌ ತರಬೇತಿ ನೀಡಿದ್ದೇವೆ. ಬಿಡುಗಡೆಯಾದ ಮೇಲೆ ಕೆಲಸವನ್ನೂ ಕೊಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜೈಲರ್‌ಗಳಾದ ಪರಮಾನಂದ ಹರವಾಳ, ಶೈನಾಜ್‌ ನಿಗೆವಾನ್‌, ಶೃಂಗೇರಿ ಪೀಠದ ವಿನೀತ್‌ ಹಾಜರಿದ್ದರು. ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದ 30 ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. 2ನೇ ಬ್ಯಾಚ್‌ನವರಿಗೆ ತರಬೇತಿ ಕಿಟ್‌ ವಿತರಿಸಲಾಯಿತು. 

ಕೈದಿಗಳ ಕಂಪ್ಯೂಟರ್‌ ತರಬೇತಿ ವೀಕ್ಷಿಸಿದ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ

ಮೂರು ತಿಂಗಳು ತರಬೇತಿ

ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪರಿವರ್ತನೆ ಮತ್ತು ಪುನರ್ವಸತಿಗಾಗಿ ಕಂಪ್ಯೂಟರ್ ತರಬೇತಿ ನಡೆಯುತ್ತಿದೆ. ಶೃಂಗೇರಿ ಶಾರದಾ ಪೀಠದ ಸೋಕೇರ್‌ ಇಂಡ್‌ ಸಂಸ್ಥೆ 8 ಕಂಪ್ಯೂಟರ್‌ಗಳನ್ನು ಒದಗಿಸಿದ್ದರೆ ಅದಾನಿ ಗ್ರೂಪ್‌ನ ಸಕ್ಷಮ ತರಬೇತಿ ಕೇಂದ್ರ ಕಂಪ್ಯೂಟರ್‌ ಶಿಕ್ಷಕರನ್ನು ಒದಗಿಸಿದೆ. ಮೊದಲ ಬ್ಯಾಚ್‌ನಲ್ಲಿ 30 ಕೈದಿಗಳ ಮೂರು ತಿಂಗಳ ತರಬೇತಿ ಪೂರ್ಣಗೊಂಡಿದ್ದು ಎರಡನೇ ಬ್ಯಾಚ್‌ ಪ್ರಾರಂಭವಾಗಿದೆ. ಇನ್ನು ಕಾರಾಗೃಹದಲ್ಲಿರುವ 29 ಮಹಿಳಾ ಕೈದಿಗಳಿಗೆ ಹೊಲಿಗೆ ತರಬೇತಿ ನೀಡಿ ಯಂತ್ರ ಕೊಡಿಸಲೂ ಸಂಸ್ಥೆಗಳು ಯೋಜಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.