ADVERTISEMENT

ಜಯತೀರ್ಥ ಕಾಗಲಕರ್ ನಿಧನಕ್ಕೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 8:09 IST
Last Updated 14 ಮೇ 2021, 8:09 IST
ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಅವರ ಸ್ಮರಣಾರ್ಥ ಕಲಬುರ್ಗಿಯ ಪತ್ರಿಕಾ ಭವನದಲ್ಲಿ ಮೌನಾಚರಣೆ ಮಾಡಲಾಯಿತು
ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಅವರ ಸ್ಮರಣಾರ್ಥ ಕಲಬುರ್ಗಿಯ ಪತ್ರಿಕಾ ಭವನದಲ್ಲಿ ಮೌನಾಚರಣೆ ಮಾಡಲಾಯಿತು   

ಕಲಬುರ್ಗಿ: ಕೋವಿಡ್‌ನಿಂದ ಗುರುವಾರ ನಿಧನರಾದ ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕಜಯತೀರ್ಥ ಕಾಗಲಕರ್ ಅವರ ಸ್ಮರಣಾರ್ಥ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ‘ಜಯತೀರ್ಥ ಅವರನ್ನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಾ ಬಂದಿದ್ದೇನೆ. ಅತ್ಯಂತ ಬದ್ಧತೆಯಿಂದ ಕೆಲಸ ನಿರ್ವಹಿಸಿಕೊಂಡು ಬಂದಿದ್ದರು. ಅವರದು ಸಾಯುವ ವಯಸ್ಸಲ್ಲ. ಕೋವಿಡ್ ಬಗ್ಗೆ ಎಲ್ಲ ಪತ್ರಕರ್ತರೂ ಅಗತ್ಯ ಮುನ್ನೆಚ್ಚರಿಕೆ ವಹಿಸಿ’ ಎಂದರು.

ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕವಾದಿರಾಜ ವ್ಯಾಸಮುದ್ರ ಮಾತನಾಡಿ, ‘ಪತ್ರಿಕೆಗಳು ವಿಭಾಗ ಮಟ್ಟದಲ್ಲಿ, ಜಿಲ್ಲಾ ಕೇಂದ್ರಗಳನ್ನು ಬ್ಯುರೊಗಳನ್ನು ಆರಂಭಿಸದಿದ್ದ ಕಾಲದಲ್ಲಿ ಕಾಗಲಕರ್ ಅವರು ವಿಧಾನಮಂಡಲ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ಆದ ಚರ್ಚೆಗಳನ್ನು ವಿವರವಾಗಿ ವರದಿ ಮಾಡಿ ಎಲ್ಲ ಆವೃತ್ತಿಗಳಲ್ಲಿ ಬರುವಂತೆ ನೋಡಿಕೊಳ್ಳುತ್ತಿದ್ದರು‌’ ಎಂದು ಸ್ಮರಿಸಿದರು.

ADVERTISEMENT

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ ಮಾತನಾಡಿ, ‘ಬಹಳಷ್ಟು ಪತ್ರಕರ್ತರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಅಂಥದರಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದರೆ ಆಸ್ಪತ್ರೆಗೆ ಖರ್ಚು ಮಾಡಲು ಬೇರೆಯವರಿಂದ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಮೃತಪಟ್ಟ ಪತ್ರಕರ್ತರಿಗೆ ಸರ್ಕಾರದಿಂದ ನೆರವು ಕೊಡಿಸಲು ಶ್ರಮಿಸುವುದರ ಜೊತೆಗೆ ಸಂಘದಿಂದಲೂ ಆರ್ಥಿಕ ನೆರವು ನೀಡಲಾಗುವುದು’ ಎಂದರು.

ವಾರ್ತಾ ಇಲಾಖೆ ಉಪನಿರ್ದೇಶಕ ಸಿದ್ಧೇಶ್ವರಪ್ಪ ಜಿ.ಬಿ., ಪತ್ರಕರ್ತರಾದ ಶೇಷಮೂರ್ತಿ ಅವಧಾನಿ, ಬಾಬುರಾವ ಯಡ್ರಾಮಿ, ಹಣಮಂತರಾವ ಭೈರಾಮಡಗಿ, ಶರಣು ಗೊಬ್ಬೂರ, ಸಂಗಮನಾಥ ರೇವತಗಾಂವ, ದೇವಿಂದ್ರಪ್ಪ ಆವಂಟಿ, ಸಂಜಯ ಚಿಕ್ಕಮಠ, ದೇವಿಂದ್ರಪ್ಪ ಕಪನೂರ, ಭೀಮಾಶಂಕರ ಫಿರೋಜಾಬಾದ್ ಇತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.