ಶಹಾಬಾದ್: ‘ಇದು ಗಾಂಧಿ ಕಾಂಗ್ರೆಸ್ ಅಲ್ಲ, ಖರ್ಗೆ ಆ್ಯಂಡ್ ಕಂಪನಿಯ ಪಕ್ಷವಾಗಿದೆ. ಅವರ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರೂ ಅಭ್ಯರ್ಥಿಗಳು ಇಲ್ಲ’ ಎಂದು ಸಂಸದ ಡಾ. ಉಮೇಶ ಜಾಧವ ಟೀಕಿಸಿದರು.
ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಕೆಲಸ ಮಾಡದೇ ಕೇವಲ ರಾಜಕೀಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಮೋದಿ ಅಭಿವೃದ್ಧಿ ಕಾಣಿಸುತ್ತಿಲ್ಲ’ ಎಂದು ಹೇಳಿದರು.
ಬಿಜೆಪಿ ಕಲಬುರಗಿ ನಗರ ಅಧ್ಯಕ್ಷ ಚಂದು ಪಾಟೀಲ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಮೋದಿಯವರ ಮೇಲೆ ಎಷ್ಟೇ ಕೆಸರು ಎರಚಿದರೂ, ಆ ಕೆಸರಿನಲ್ಲಿ ಕಮಲ ಅರಳುತ್ತದೆ. ದೇಶದಲ್ಲಿ ಮೋದಿ ಗ್ಯಾರಂಟಿಯ ಮುಂದೆ, ಕಾಂಗ್ರೆಸ್ ಗ್ಯಾರಂಟಿಗಳು ಮಣ್ಣು ಪಾಲಾಗಲಿವೆ’ ಎಂದರು.
ಶಾಸಕ ಬಸವರಾಜ ಮತ್ತಿಮಡು, ‘ಕಳೆದ ಚುನಾವಣೆಯಲ್ಲಿ ಡಾ. ಜಾಧವ ಅವರು ಒಂದು ಲಕ್ಷ ಮತದಿಂದ ಗೆಲುವು ಸಾಧಿಸಿದ್ದರು. ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಕೋರಿದರು.
ವಿಧಾನ ಪರಿಷತ್ ಪ್ರತಿಪಕ್ಷದ ಉಪನಾಯಕ ಸುನೀಲ ವಲ್ಯಾಪುರೆ ಮಾತನಾಡಿ. ‘ಶಹಾಬಾದ್ ನಗರದಲ್ಲಿ ₹55 ಕೋಟಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವಾರು ಯೋಜನೆಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಗಿದೆ’ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು. ವೇದಿಕೆ ಮೇಲೆ ಶಶಿಕಲಾ ಟೆಂಗಳಿ, ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಭಾಗೀರತಿ ಗುನ್ನಾಪುರ, ಕನಕಪ್ಪ ದಂಡಗುಲಕರ್, ನಗರ ಸಭೆ ಸದಸ್ಯರಾದ ಜಗದೇವ ಗುತ್ತೇದಾರ, ರವಿ ರಾಠೋಡ, ಪಾರ್ವತಿ ಪವಾರ, ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ, ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ಸಿದ್ರಾಮ ಕುಸಾಳೆ ಹಾಜರಿದ್ದರು.
ಅಧಿಕಾರ ಸ್ವೀಕಾರ: ಇದೇ ಸಂದರ್ಭದಲ್ಲಿ ಮಂಡಲದ ನೂತನ ಅಧ್ಯಕ್ಷ ನಿಂಗಣ್ಣ ಹುಳಗೋಳ ಅಧಿಕಾರ ಸ್ವೀಕರಿಸಿದರು. ಪ್ರಮಖರಾದ ಶಿವುಕುಮಾರ ಇಂಗಿನಶೆಟ್ಟಿ, ಭೀಮರಾವ ಸಾಳೊಂಕೆ, ಜಯಶ್ರೀ ಸೂಡಿ, ಚನ್ನಣ್ಣ ಬಾಳಿ, ಬಸವರಾಜ ಪಂಚಾಳ, ರಾಜು ಮುಕ್ಕಣ್ಣ, ಭಾಗವತ ಸುಳೆ, ಭೀಮರಾವ ಮೇಟಿ, ಅರುಣ ಪಟ್ಟಣಕರ್, ಅಶೋಕ ಸಾಹು ಜೇವರ್ಗಿ, ಶಿವಲಿಂಗಪ್ಪ ಮಿಣಜಗಿ, ದಿನೇಶ ಗೌಳಿ, ದತ್ತಾ ಫಂಡ್, ರಾಜು ದಂಡಗುಲಕರ್, ಚಂದ್ರಕಾಂತ ಗೊಬ್ಬುರಕರ್, ಸುಭಾಷ ಜಾಪೂರ, ಯಲ್ಲಪ್ಪ ದಂಡಗುಲರ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.