ಕಲಬುರಗಿ: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ) ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಗತ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ‘ಜಾತಿವಾದಿ ಸಿದ್ದರಾಮಯ್ಯ ಸರ್ಕಾರ’, ‘ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಂಡ ಸರ್ಕಾರ’, ‘ದಲಿತ ವಿರೋಧಿ’, ‘ಜಾತಿವಾದಿ ಕಾಂಗ್ರೆಸ್ ಸರ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ನಿಗದಿಯಾಗಿದ್ದ ₹39,121 ಕೋಟಿ ಪೈಕಿ ₹14,282 ಕೋಟಿ ಅನುದಾನ ಗ್ಯಾರಂಟಿಗೆ ಬಳಸಲು ತೀರ್ಮಾನಿಸಿದ್ದು ಖಂಡನೀಯ. ಸಾಮಾಜಿಕ ನ್ಯಾಯ ಒದಗಿಸುವ ಭರವಸೆಯೊಂದಿಗೆ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ, ಈಗ ಶೋಷಿತರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಸಾವಿರಾರು ಕೋಟಿ ರೂಪಾಯಿ ಬಳಸಿಕೊಂಡು ಎಸ್‌ಸಿ, ಎಸ್‌ಟಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಪ್ರೋತ್ಸಾಹ ಧನವನ್ನೂ ಕಡಿತಗೊಳಿಸಿದೆ. ವಿದೇಶಗಳಲ್ಲಿ ಕಲಿಯುತ್ತಿರುವ ಸಂಶೋಧನಾ ವಿದ್ಯಾರ್ಥಿಗಳ ಸಹಾಯಧನವನ್ನೂ ನಿಲ್ಲಿಸಿದೆ. ಇದೆಲ್ಲವನ್ನು ನೋಡಿಕೊಂಡು ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಶಾಸಕರು, ಸಚಿವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿಗಾಗಿ ತೆಗೆದುಕೊಂಡಿದ್ದ ಮೀಸಲು ಅನುದಾನವನ್ನು ತಕ್ಷಣವೇ ವರ್ಗಾವಣೆ ಮಾಡಬೇಕು. ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಮುಂದುವರಿಸಬೇಕು. ಇಲ್ಲದೆ ಇದ್ದರೆ ಮೀಸಲಾತಿ ಕ್ಷೇತ್ರಗಳಿಂದ ಗೆದ್ದ ಶಾಸಕರು ಮತ್ತು ಸಚಿವರ ಮನೆಗಳ ಮುಂದೆ ಧರಣಿ ಕೂರುತ್ತೇವೆ. ಸಚಿವರು, ಶಾಸಕರಿಗೆ ಕಂಡಲ್ಲಿ ಘೇರಾವ್ ಹಾಕುತ್ತೇವೆ’ ಎಂದು ಎಚ್ಚರಿಸಿದರು.
ಹಕ್ಕೊತ್ತಾಯಗಳು: ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7 (ಡಿ) ಮತ್ತು 7 (ಸಿ) ರದ್ದುಪಡಿಸಬೇಕು. ನನೆಗುದಿಗೆ ಬಿದ್ದ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು. ದಲಿತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆಗಳ ಚರ್ಚೆಗೆ ಒಂದು ವಾರ ವಿಶೇಷ ವಿಧಾನಸಭಾ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ, ತಾಲ್ಲೂಕು ಸಂಚಾಲಕರಾದ ಕಪೀಲ ಸಿಂಗೆ, ಸುಭಾಷ ಕಲ್ಮೋರೆ, ಮಹೇಶ ಕೋಕಿಲೆ, ಪರಶುರಾಮ ರಾಜಾಪುರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.