ADVERTISEMENT

ನೇಮಕಾತಿ ತಡೆ ನಿರ್ಧಾರ ಕೈಬಿಡಿ

ಕಾಂಗ್ರೆಸ್ ಮುಖಂಡ ಗುತ್ತೇದಾರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 7:31 IST
Last Updated 9 ಜುಲೈ 2020, 7:31 IST
ಜಗದೇವ ಗುತ್ತೇದಾರ
ಜಗದೇವ ಗುತ್ತೇದಾರ   

ಕಲಬುರ್ಗಿ: ‘ರಾಜ್ಯ ಬಿಜೆಪಿ ಸರ್ಕಾರ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ತಡೆ ಹಿಡಿದಿರುವುದು ಖಂಡನೀಯ. ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ಯಾವಾಗಲೂ ಮೋಸ ಮಾಡುತ್ತಲೇ ಬರುತ್ತಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಟೀಕಿಸಿದ್ದಾರೆ.

‘ಕೋವಿಡ್–19 ನೆಪ ಹೇಳಿ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ ತಡೆ ಹಿಡಿಯುವುದು ಯಾವ ನ್ಯಾಯ? ಒಂದು ವೇಳೆ ಇವರಿಗೆ ಕೋವಿಡ್ ಬಗ್ಗೆ ಕಾಳಜಿ ಇದ್ದರೆ, ಇವರಿಗೆ ಕಲ್ಯಾಣ ಕರ್ನಾಟಕ ಭಾಗವಷ್ಟೇ ಕಾಣಿಸುವುದೇ? ಕರ್ನಾಟಕದ ಎಲ್ಲ ಕಡೆ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ, ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ತಡೆ ಹಿಡಿದಿರುವುದು ಬಿಜೆಪಿ ಸರ್ಕಾರದ ಘೋರ ಅನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕಚೇರಿಗಳಲ್ಲಿ ಮೊದಲೇ ಸಿಬ್ಬಂದಿ ಕೊರತೆ ಇದ್ದು, ಸರ್ಕಾರದ ಬಹುತೇಕ ಕೆಲಸ ವಿಳಂಬವಾಗುತ್ತಿದೆ. ಕೆಲಸಕ್ಕಾಗಿ ಜನಸಾಮಾನ್ಯರು ಪ್ರತಿ ದಿನವೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲ ಗೊತ್ತಿದ್ದರೂ ಸಹ ಬಿಜೆಪಿ ಸರ್ಕಾರ ನೇಮಕಾತಿ ಪ್ರಕ್ರಿಯೆ ತಡೆ ಹಿಡಿದಿರುವುದು ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಹಿಂದುಳಿದ ಭಾಗದಲ್ಲಿ ಅನೇಕ ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿ ಅಗತ್ಯವಿದೆ. ಕಲ್ಯಾಣ ಕರ್ನಾಟಕ ವಿರೋಧಿ ನೀತಿಯನ್ನು ಮುಖ್ಯಮಂತ್ರಿಗಳು ಕೂಡಲೇ ಹಿಂಪಡೆಯಬೇಕು. ಈ ಭಾಗದಲ್ಲಿ ಎಲ್ಲ ಹುದ್ದೆಗಳನ್ನು ನೇಮಕ ಮಾಡಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.