ADVERTISEMENT

ಜನಪ್ರತಿನಿಧಿಗಳು, ಸಂಘಟನೆಗಳ ಬೇಡಿಕೆ ಪರಿಗಣನೆ: ಸಚಿವ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 7:04 IST
Last Updated 10 ಸೆಪ್ಟೆಂಬರ್ 2024, 7:04 IST
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪೋಸ್ಟರ್ ಬಿಡುಗಡೆ ಮಾಡಿದರು. ಫೌಜಿಯಾ ತರನ್ನುಮ್, ಡಾ.ಅಜಯ್ ಸಿಂಗ್, ಶರಣಪ್ಪ ಎಸ್.ಡಿ., ಭಂವರ್ ಸಿಂಗ್ ಮೀನಾ, ಅಡ್ಡೂರು ಶ್ರೀನಿವಾಸಲು ಭಾಗವಹಿಸಿದ್ದರು
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪೋಸ್ಟರ್ ಬಿಡುಗಡೆ ಮಾಡಿದರು. ಫೌಜಿಯಾ ತರನ್ನುಮ್, ಡಾ.ಅಜಯ್ ಸಿಂಗ್, ಶರಣಪ್ಪ ಎಸ್.ಡಿ., ಭಂವರ್ ಸಿಂಗ್ ಮೀನಾ, ಅಡ್ಡೂರು ಶ್ರೀನಿವಾಸಲು ಭಾಗವಹಿಸಿದ್ದರು   

ಕಲಬುರಗಿ: ಬಹು ನಿರೀಕ್ಷಿತ ಸಚಿವ ಸಂಪುಟ ಸಭೆ ಇದೇ 17ರಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ನಡೆಯಲಿದ್ದು, ಪಕ್ಷಭೇದ ಮರೆತು ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ಸಲಹೆಗಳನ್ನು ಪರಿಶೀಲಿಸಲಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಯ ಕುರಿತು ಹಲವು ಮಹತ್ವದ ತೀರ್ಮಾನಗಳು ಹೊರಬೀಳುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಶಾಭಾವ ವ್ಯಕ್ತಪಡಿಸಿದರು.

ಸಚಿವ ಸಂಪುಟ ಸಭೆಯ ಕುರಿತು ನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಮ್ಮ ಪಕ್ಷದ ಶಾಸಕರು, ಬೇರೆ ಪಕ್ಷದ ಶಾಸಕರು, ಕಲ್ಯಾಣ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ (ಕೆಕೆಸಿಸಿಐ) ಹಾಗೂ ಕೆಲ ಸಂಘಟನೆಗಳವರು ಜಿಲ್ಲೆಯ ಅಭಿವೃದ್ಧಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೇ, ಅಧಿಕಾರಿಗಳೂ ವಿವಿಧ ಇಲಾಖೆಗಳಲ್ಲಿ ಪ್ರಸ್ತಾವದ ಹಂತದಲ್ಲಿರುವ ಯೋಜನೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಿದ್ದಾರೆ. ಒಟ್ಟಾರೆಯಾಗಿ ಎರಡು ಸಭೆಗಳನ್ನು ನಡೆಸಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಕುರಿತು ಒಂದು ನೀಲನಕ್ಷೆ ಸ್ಪಷ್ಟವಾಗಿದೆ’ ಎಂದರು.

ADVERTISEMENT

‘ಸೆ. 17ರಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಿ ಡಿಎಆರ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವರು. ಮಧ್ಯಾಹ್ನದ ಬಳಿಕ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಕಾನೂನು ಸಚಿವರು ಸಂಪುಟದ ತೀರ್ಮಾನಗಳನ್ನು ಸಭೆಯ ಬಳಿಕ ಪ್ರಕಟಿಸಲಿದ್ದಾರೆ’ ಎಂದು ಹೇಳಿದರು.

90 ಸಾವಿರ ಜನರಿಂದ 113 ಕಿ.ಮೀ. ಮಾನವ ಸರಪಳಿ: ‘ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಗಡಿ ಆರಂಭವಾಗುವ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದಿಂದ ಚಿತ್ತಾಪುರ ತಾಲ್ಲೂಕಿನ ದೇವಲಾನಾಯಕ ತಾಂಡಾವರೆಗೆ ಜಿಲ್ಲೆಯ ಗಡಿಯಿಂದ ಯಾದಗಿರಿ ಜಿಲ್ಲೆಗೆ ಮಾನವ ಸರಪಳಿ ಹೋಗಲಿದೆ. ಜಿಲ್ಲೆಯಲ್ಲಿ 113 ಕಿ.ಮೀ. ಉದ್ದದ‌ ಈ ಮಾನವ ಸರಪಳಿಯಲ್ಲಿ 90 ಸಾವಿರ ಜನರು ಭಾಗವಹಿಸಲಿದ್ದಾರೆ’ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, ‘ಸಚಿವ ಸಂಪುಟ ಸಭೆಯಲ್ಲಿ ಬರೀ ಕಲಬುರಗಿ ಜಿಲ್ಲೆಯ ವಿಷಯಗಳು ಮಾತ್ರ ಚರ್ಚೆಯಾಗುವುದಿಲ್ಲ. ಬದಲಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಕುರಿತು ನಿರ್ಣಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಪತ್ರಿಕಾಗೋಷ್ಠಿಯಲ್ಲಿದ್ದರು.

10 ವರ್ಷಗಳಲ್ಲಿ 30 ಸಾವಿರ ಕಾಮಗಾರಿಗಳನ್ನು ಕೆಕೆಆರ್‌ಡಿಬಿ ಮೂಲಕ ಅನುಷ್ಠಾನಗೊಳಿಸಲಾಗಿದೆ. 371 ಜೆ ಕಲಂ ಇರದಿದ್ದರೆ ಇಷ್ಟು ಕಾಮಗಾರಿಗಳು ಆಗುತ್ತಿರಲಿಲ್ಲ
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
‘ಪ್ರತಿ ಕ್ಷೇತ್ರದಲ್ಲಿ 100 ಕಿ.ಮೀ ಹೊಸ ರಸ್ತೆ’
ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಕಿ.ಮೀ. ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ‍ಪ್ರಕಟಿಸಿದರು. ‘ಕಲ್ಯಾಣ ಪಥ ಯೋಜನೆಗಾಗಿ ಬಜೆಟ್‌ನಲ್ಲಿ ₹ 1 ಸಾವಿರ ಕೋಟಿ ಒದಗಿಸಲಾಗುತ್ತಿದೆ. ಅತ್ಯಾಧುನಿಕ ತಾಂತ್ರಿಕತೆಯನ್ನು ಅಳವಡಿಸಿ ಈ ರಸ್ತೆ ನಿರ್ಮಿಸಲಾಗುವುದು. ರಾಜ್ಯದಾದ್ಯಂತ ಪ್ರಗತಿ ಪಥ ಯೋಜನೆಯಡಿ ₹ 7 ಸಾವಿರ ಕೋಟಿ ಮೊತ್ತದಲ್ಲಿ ರಸ್ತೆ ನಿರ್ಮಿಸಲಾಗುವುದು. ಜೊತೆಗೆ ಪ್ರಧಾನಮಂತ್ರಿ ಅವರು ಗ್ರಾಮ ಸಡಕ್ ಯೋಜನೆ–2ಗೆ ಅನುಮೋದನೆ ನೀಡಿದ್ದಾರೆ. ಹೀಗಾಗಿ ಯಾರು ಬೇಡ ಅಂದರೂ ಪ್ರತಿ ಕ್ಷೇತ್ರದಲ್ಲಿ 100 ಕಿ.ಮೀ. ಹೊಸ ರಸ್ತೆಗಳು ನಿರ್ಮಾಣಗೊಳ್ಳಲಿವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕ್ಷೇತ್ರಕ್ಕೆ ₹ 2 ಕೋಟಿ ಒದಗಿಸಲಾಗಿದೆ’ ಎಂದರು. ‘ಕಲಬುರಗಿ ನಗರದ ರಸ್ತೆಗಳ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೈಪ್‌ಲೈನ್ ಅಳವಡಿಸಲು ಅಗೆದ ರಸ್ತೆಗಳನ್ನು ದುರಸ್ತಿ ಮಾಡುವಂತೆ ಎಲ್ ಅಂಡ್ ಟಿ ಕಂಪನಿಗೆ ಒಂದು ತಿಂಗಳ ಗಡುವು ನೀಡಲಾಗಿದೆ’ ಎಂದು ತಿಳಿಸಿದರು.
‘ಬಹಮನಿ ಕೋಟೆ ಅತಿಕ್ರಮಣ ಶೀಘ್ರ ತೆರವು’
‘ಬಹಮನಿ ಕೋಟೆಯ ಒಳಭಾಗದಲ್ಲಿ ವಾಸಿಸುವವರನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು ಅವರಿಗೆ ಬೇರೆ ಕಡೆ ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಅವರಿಗೆ ವಿದ್ಯುತ್ ನೀರು ಕೊಟ್ಟು ನಾವೇ ತಪ್ಪು ಮಾಡಿದ್ದೇವೆ. ಕೋಟೆಯ ಹೊರಭಾಗದಲ್ಲಿ ಕೆಲವರು ಅನಧಿಕೃತವಾಗಿ ಶೆಡ್‌ಗಳನ್ನು ಹಾಕಿಕೊಂಡಿರುವುದು ಗಮನಕ್ಕೆ ಬಂದಿದ್ದು ಅವರನ್ನು ಅಲ್ಲಿಂದ ಶೀಘ್ರ ತೆರವುಗೊಳಿಸಲಾಗುವುದು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.