ADVERTISEMENT

ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಣ: ಸಿಪಿಎಂ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 8:19 IST
Last Updated 15 ಅಕ್ಟೋಬರ್ 2025, 8:19 IST
ಸಿಪಿಎಂ
ಸಿಪಿಎಂ   

ಕಲಬುರಗಿ: ಶಿಕ್ಷಣ ಸಂಸ್ಥೆಗಳು, ಮತ್ತಿತರ ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಯಂತ್ರಿಸುವ ಸರ್ಕಾರದ ಪ್ರಸ್ತಾವಕ್ಕೆ ಸಿಪಿಐ (ಎಂ) ಬೆಂಬಲ ವ್ಯಕ್ತಪಡಿಸಿದೆ. ಅದೇ ವೇಳೆಗೆ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಮಾಜ ಮತ್ತು ಸರ್ಕಾರ ಸನ್ನದ್ಧವಾಗಬೇಕೇ ಹೊರತು ಸಂಘಟನೆಗಳ ಮೇಲೆ ನಿಷೇಧ ಹೇರುವುದು ಪರಿಹಾರವಲ್ಲ ಎಂದೂ ಅಭಿಪ್ರಾಯಪಟ್ಟಿದೆ.

ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ‘ಜನರ ಮನಸ್ಸಿನಲ್ಲಿ ಕೋಮು ವಿಷಬೀಜ ಬಿತ್ತುವ ಉದ್ದೇಶದಿಂದಲೇ ಆಡಳಿತದ ಎಲ್ಲ ವಿಭಾಗಗಳಲ್ಲಿ ತನ್ನ ಸಿದ್ಧಾಂತವನ್ನು ಅಂತರಂಗದಲ್ಲಿ ಬೆಂಬಲಿಸುವವರನ್ನು ತೂರಿಸಿರುವ ಸಂಘ ನೆಲದ ಕಾನೂನನ್ನು ಕಾಲಕಸದಂತೆ ಪರಿಗಣಿಸುತ್ತಿದೆ. ತಾನೊಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ಆದರೆ ದೇಶದ ರಾಜಕಾರಣವನ್ನು ತನಗೆ ಬೇಕಾದ ಹಾಗೆ ನಿಯಂತ್ರಿಸುವ ಮತ್ತು ದ್ವೇಷ ರಾಜಕಾರಣವನ್ನು ಮುಂದೊತ್ತುತ್ತಿರುವ ಸಂಗತಿ ಜಗಜ್ಜಾಹೀರಾವಾಗಿದೆ’ ಎಂದು ಟೀಕಿಸಿದ್ದಾರೆ.

‘ಸರ್ಕಾರ ಮತ್ತು ಸಮಾಜ ಸಂಘ ಪ್ರತಿಪಾದಿಸುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಬೇಕು. ಸಹಬಾಳ್ವೆಯ ಸಾಮರಸ್ಯದ ಮೌಲ್ಯಗಳನ್ನು ಸ್ಥಿರವಾಗಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.