ADVERTISEMENT

ಕಲಬುರ್ಗಿ | ಕೋವಿಡ್‌ಗೆ ಮತ್ತೆ ಇಬ್ಬರ ಸಾವು

ಪಿಎನ್‌ಟಿ ಕಾಲೊನಿಯಲ್ಲಿ ಒಂದೇ ಕಡೆ ಏಳು ಮಂದಿಗೆ ಅಂಟಿಕೊಂಡ ವೈರಾಣು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 5:46 IST
Last Updated 11 ಜುಲೈ 2020, 5:46 IST
   

ಕಲಬುರ್ಗಿ: ಜಿಲ್ಲೆಯಲ್ಲಿ ಮತ್ತಿಬ್ಬರು ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದು ಶುಕ್ರವಾರ ದೃಢಪಟ್ಟಿದೆ. ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌34ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದ್ದಾರೆ.

ನಗರದ ನ್ಯೂ ರಾಘವೇಂದ್ರ‌ ಕಾಲೊನಿ ನಿವಾಸಿ, 52 ವರ್ಷದ ಪುರುಷ ಮೃತಪಟ್ಟವರಲ್ಲಿ ಒಬ್ಬರು. ತೀವ್ರ ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದ ಅವರು, ಜುಲೈ 6ರಂದು ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 9ರಂದು ನಿಧನ ಹೊಂದಿದರು.

ಅದೇ ರೀತಿ ತೀವ್ರ ಉಸಿರಾಟ ತೊಂದರೆ ಇದ್ದ ನಗರದ ಕೈಲಾಸ ನಗರದ 61 ವರ್ಷದ ವೃದ್ಧ ಜುಲೈ 3ರಂದು ಅಸ್ಪತ್ರೆಗೆ ದಾಖಲಾಗಿದ್ದರು. ಜುಲೈ 7ರಂದು ಕೊರೊನಾ ತಗುಲಿದ್ದು ದೃಢವಾಗಿ ಜುಲೈ 8ರಂದು ನಿಧನ ಹೊಂದಿದ್ದಾರೆ.

ADVERTISEMENT

‌ಪಿಎನ್‌ಟಿ ಕಾಲೊನಿಯಲ್ಲಿ 7 ಮಂದಿಗೆ ಕೋವಿಡ್‌: ಏಳು ಪುಟ್ಟ ಮಕ್ಕಳು, 18 ಮಹಿಳೆಯರೂ ಸೇರಿದಂತೆ ಶುಕ್ರವಾರ ಒಟ್ಟು 58 ಮಂದಿಗೆ ಪಾಸಿಟಿವ್‌ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೇ ಏರಿದೆ. ಇವರಲ್ಲಿ 34 ಮಂದಿ ಮೃತಪಟ್ಟಿದ್ದು, 481 ಮಂದಿ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪ‍ಡೆಯುತ್ತಿದ್ದಾರೆ.

ಉಳಿದಂತೆ ಶುಕ್ರವಾರ 52 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರೊಂದಿಗೆ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 1444ಕ್ಕೆ ಏರಿದೆ.

1 ವರ್ಷದ ಒಂದು ಮಗು, 2 ವರ್ಷದ ಇಬ್ಬರು ಹೆಣ್ಣುಮಕ್ಕಳು, 5 ವರ್ಷದ ಬಾಲಕಿ ಹಾಗೂ 6 ವರ್ಷದ ಬಾಲಕರಿಗೆ ಶುಕ್ರವಾರ ಕೋವಿಡ್‌ ಪತ್ತೆಯಾಗಿದೆ. ಒಟ್ಟು 28 ಮಂದಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದೇ ಪತ್ತೆಯಾಗಿಲ್ಲ. ಉಳಿದಂತೆ, 13 ಮಂದಿಗೆ ವಿಷಮಶೀತ ಜ್ವರ, ಒಬ್ಬರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಇಲ್ಲಿನ ಪಿಎನ್‌ಟಿ ಕಾಲೊನಿಯಲ್ಲಿ ಅಕ್ಕಪಕ್ಕದ ಮನೆಯವರು ಸೇರಿ ಒಂದೇ ಕಡೆ 7 ಮಂದಿಗೆ ಕೋವಿಡ್‌ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.