ADVERTISEMENT

ಬೀದಿ ಪ್ರಾಣಿಗಳಿಗೂ ನೀರು, ಆಹಾರ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 16:11 IST
Last Updated 3 ಏಪ್ರಿಲ್ 2020, 16:11 IST

ಕಲಬುರ್ಗಿ: ನಗರದ ಬೀದಿಗಳಲ್ಲಿರುವ ಪ್ರಾಣಿಗಳಿಗೆ ಆಹಾರ ಮತ್ತು ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು, ಪ್ರಥಮ ಹಂತದಲ್ಲಿ ನಗರದ 10 ಸ್ಥಳಗಳನ್ನು ಗುರುತಿಸಿ ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ತಿಳಿಸಿದ್ದಾರೆ.

ಹೋಟೆಲ್‌, ರೆಸ್ಟೊರೆಂಟ್ ಬಂದ್‍ನಿಂದ ಈ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಏಪ್ರಿಲ್ 3ರಿಂದ ಬೀದಿ ನಾಯಿ ಹಾಗೂ ಬೆಕ್ಕುಗಳಿಗೆ ಅನ್ನದ ಜೊತೆಯಲ್ಲಿ ಪೆಡಿಗ್ರೀ ಮತ್ತು ಡ್ರೂಲ್ಸ್ ನಾಯಿಗಳ ಆಹಾರ ಸಹ ನೀಡಲಾಗುತ್ತಿದೆ. ಬೇಸಿಗೆಯಿಂದಾಗಿ ಪ್ರಾಣಿಗಳ ಮೈಯಲ್ಲಿ ನೀರು ಮತ್ತು ಪೋಷಕಾಂಶ ಕಾಪಾಡಲು ನಿಗಾ ವಹಿಸಲಾಗುತ್ತಿದೆ.

ಬೀದಿ ಆಕಳು, ಎತ್ತು, ಎಮ್ಮೆ ಮತ್ತು ಕೋಣಗಳಿಗೆ ಹಸಿ ಮೇವನ್ನು ಸಣ್ಣ ಗಾತ್ರದಲ್ಲಿ ಕಟಾವಣೆ ಮಾಡಿ, ಆಯ್ಕೆ ಮಾಡಿದ ಜಾಗದಲ್ಲಿ ಇಡಲಾಗಿದೆ. ಈ ಮೇವಿನ ಮೇಲೆ ಬೆಲ್ಲದ ನೀರನ್ನು ಕೂಡ ಸಿಂಪಡಿಸಲಾಗಿದೆ. ಇದರಿಂದ ಪ್ರಾಣಿಗಳಿಗೆ ಮೇವು ರಿಚಿಯಾಗಲಿದೆ. ಆಹಾರ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ADVERTISEMENT

ಪ್ರಾಣಿ ಪ್ರೇಮಿಗಳಾದ ಅಲ್ಲಮಪ್ರಭು ಖುಬಾ ಅವರು ಮಹಾನಗರ ಪಾಲಿಕೆಯಿಂದ ಬೀದಿ ಪ್ರಾಣಿಗಳಿಗೆ ನೀಡುತ್ತಿರುವ ಆಹಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, 3,000 ಕೆ.ಜಿ. ಅಕ್ಕಿಯನ್ನು ದಾನ ಮಾಡಿದ್ದಾರೆ. ನಾಯಿಗಳಿಗೆ ಆಹಾರದ ಕೊರತೆ ಮತ್ತು ರುಚಿಯನ್ನು ಮನಗಂಡು ಮೆಹಬೂಬ್‌ಸಾಬ್‌ ಹಾಗೂ ಅವಿನಾಶ್ ಪೆಟ್ ಕೇರ್ ಸಂಸ್ಥೆಯವರು ಪೆಡಿಗ್ರೀ ಮತ್ತು ಡ್ರೂಲ್ಸ್ ಆಹಾರವನ್ನು ದಾನ ಮಾಡಿದ್ದಾರೆ.

ಆರ್ಯನ್ ಗೋ ಶಾಲೆ ಟ್ರಸ್ಟ್ (ರಿ)ನ ವೀರೇಶ ಎಸ್. ಮಠ ಅವರು ಆಕಳು ಮತ್ತು ಎಮ್ಮೆಗಳಿಗೆ ಪ್ರತಿದಿನ 500 ಕೆ.ಜಿ. ಹಸಿ ಮೇವು ದಾನ ಮಾಡುತ್ತಿದ್ದಾರೆ. ಬೀದಿ ಮೇಲೆ ಆಕಳು ಮತ್ತು ಇತರೆ ಜಾನುವಾರುಗಳ ಸಂಖ್ಯೆ ಹೆಚ್ಚಾದಲ್ಲಿ ಆಸಕ್ತಿಯುಳ್ಳ ಪ್ರಾಣಿ ಕಲ್ಯಾಣ ಸಂಘಗಳಿಗೆ ಹಾಗೂ ಗೋಶಾಲೆಗಳಿಗೆ ಸಂಪರ್ಕಿಸಿ ಪ್ರಾಣಿಗಳನ್ನು ಗೋ-ಶಾಲೆಗೆ ಸೇರಿಸಲಾಗುವ ಪ್ರಯತ್ನ ಕೂಡ ಮಾಡಲಾಗುವುದು.

ನಗರದ ಸುಮಾರು 10 ಸಾವಿರ ಬೀದಿ ನಾಯಿಗಳು, ಬೀದಿ ಆಕಳು ಮತ್ತು ಎಮ್ಮೆಗಳಲ್ಲಿ ರೋಗವನ್ನು ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ರೋಗದ ಲಕ್ಷಣ ಕಂಡುಬಂದಲ್ಲಿ ಪಶು ಪಾಲನಾ ಇಲಾಖೆಗೆ ಮಾಹಿತಿ ನೀಡಿ, ಸೂಕ್ತ ಚಿಕಿತ್ಸೆ ಸೌಲಭ್ಯ ನೀಡಲು ಈಗಾಗಲೇ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಪಶು– ಪಕ್ಷಿ ಪ್ರೇಮಿಗಳು ಬೀದಿ ಪ್ರಾಣಿಗಳಿಗಾಗಿ ಆಹಾರ ಮತ್ತು ನೀರು ಸ್ವ ಇಚ್ಚೆಯಿಂದ ಸರಬರಾಜು ಮಾಡಲು ಆಸಕ್ತಿ ಇರುವ ವ್ಯಕ್ತಿಗಳು ಮಹಾನಗರ ಪಾಲಿಕೆ ಕಚೇರಿಯ ದೂರವಾಣಿ ಸಂಖ್ಯೆ 08472 278675, 18004251364 ಮೂಲಕ ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.