ADVERTISEMENT

ನಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಿ: ಪಾಲಿಕೆ ನೌಕರರ ಮುಷ್ಕರ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಾಲಿಕೆ ನೌಕರರ ಮುಷ್ಕರ: ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 7:02 IST
Last Updated 9 ಜುಲೈ 2025, 7:02 IST
ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಎದುರು ಪಾಲಿಕೆ ನೌಕರರು ಪ್ರತಿಭಟನೆ ನಡೆಸಿದರು 
ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಎದುರು ಪಾಲಿಕೆ ನೌಕರರು ಪ್ರತಿಭಟನೆ ನಡೆಸಿದರು    

ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಸಿಂಧೆ ಅವರಿಗೆ ಮನವಿಪತ್ರ ಸಲ್ಲಿಸಿದ ಪ್ರತಿಭಟನಕಾರರು, ‘ಪಾಲಿಕೆ ನೌಕರರನ್ನೂ ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಏಳನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ನೌಕರರಿಗೂ ವಿಸ್ತರಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎಫ್‌ ಸೌಲಭ್ಯ, ಜ್ಯೋತಿ ಸಂಜೀವಿನಿ, ಆರೋಗ್ಯ ಸಂಜೀವಿನಿ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ಜಾರಿಗೊಳಿಸಬೇಕು. ಪ್ರತಿವರ್ಷ ಪಾಲಿಕೆ ನೌಕರರಿಗೆ ಕ್ರೀಡಾಕೂಟ ಆಯೋಜಿಸಬೇಕು. ಕೂಡಲೇ ವೃಂದವಾರು ಮುಂಬಡ್ತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಬಹುತೇಕ ಸಿಬ್ಬಂದಿ ಭಾಗಿಯಾಗಿದ್ದಾರೆ. ಇನ್ನುಳಿದವರು ಸ್ಥಳೀಯ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ಕೈಗೊಂಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಷ್ಕರ ಮುಂದುವರಿಯುತ್ತದೆ’ ಎಂದು ಪ್ರತಿಭಟನಕಾರರು ತಿಳಿಸಿದರು.  

ADVERTISEMENT

ಸಾರ್ವಜನಿಕರ ಪರದಾಟ

ಪಾಲಿಕೆ ನೌಕರರ ಮುಷ್ಕರದಿಂದಾಗಿ ವಿವಿಧ ಕೆಲಸಗಳಿಗಾಗಿ ಪಾಲಿಕೆಗೆ ಬಂದಿದ್ದ ಸಾರ್ವಜನಿಕರು ಪರದಾಡಿದರು. ಜನನ –ಮರಣ ಪ್ರಮಾಣ ಪತ್ರ ತೆರಿಗೆ ಪಾವತಿ ಹೀಗೆ ನಾನಾ ಕೆಲಸಗಳಿಗೆ ಬಂದಿದ್ದ ಹಲವರು ಬೇಸರಿಸಿಕೊಂಡು ವಾಪಸ್‌ ಆದರು. ಮಗಳ ಭಾಗ್ಯಲಕ್ಷ್ಮಿ ಬಾಂಡ್‌ಗಾಗಿ ಜನನ ಪ್ರಮಾಣ ಪತ್ರ ಪಡೆಯಲು ಬಂದಿದ್ದ ಶರಣು ಹಂಗರಗಿ ಎಂಬುವವರು ‘ನಾನು ಪ್ರಮಾಣಪತ್ರ ಸಲ್ಲಿಸಲು ಇವತ್ತೇ ಕೊನೆಯ ದಿನ. ಏನೂ ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಪೇಚಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.