ADVERTISEMENT

ವಾಡಿ: ಅತಿವೃಷ್ಟಿಗೆ ನಲುಗಿದ ಹತ್ತಿ ಬೆಳೆಗಾರರು

ನಾಲವಾರ ವಲಯದಲ್ಲಿ 3,800 ಹೆಕ್ಟೇರ್‌ ಹತ್ತಿ ಬಿತ್ತನೆ; ಶೇ20ರಷ್ಟು ನಷ್ಟ ಭೀತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 0:58 IST
Last Updated 23 ಸೆಪ್ಟೆಂಬರ್ 2020, 0:58 IST
ವಾಡಿ ಸಮೀಪದ ಹಲಕರ್ಟಿಯಲ್ಲಿ ಹತ್ತಿ ಹೊಲದಲ್ಲಿ ನೀರು ನಿಂತಿರುವುದು
ವಾಡಿ ಸಮೀಪದ ಹಲಕರ್ಟಿಯಲ್ಲಿ ಹತ್ತಿ ಹೊಲದಲ್ಲಿ ನೀರು ನಿಂತಿರುವುದು   

ವಾಡಿ: ಸತತ ಮಳೆಯಿಂದ ಹತ್ತಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲವಾರ ವಲಯದಲ್ಲಿ ವಾಣಿಜ್ಯ ಬೆಳೆ ಹತ್ತಿ ಈಗ ನೀರು ಪಾಲಾಗುವ ಭೀತಿ ಎದುರಾಗಿದೆ.

ನಾಲವಾರ ವಲಯದಲ್ಲಿ ಈ ಬಾರಿ 3,800 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಕಳಪೆ ಹತ್ತಿ ಬೀಜದ ಬಗ್ಗೆ ಈ ಮೊದಲು ರೈತರಿಂದ ಸಾಕಷ್ಟು ದೂರುಗಳು ಕೆಳಿ ಬಂದಿತ್ತು. ಬಿತ್ತಿದ ಬೀಜ ಉತ್ತಮವಾಗಿ ಮೊಳಕೆಯೊಡೆಯದ ಕಾರಣ 2–3 ಬಾರಿ ಬೀಜ ನಾಟಿ ಮಾಡಲಾಗಿದೆ.

ರಸಗೊಬ್ಬರ ನೀಡಿದರೂ ನಿರೀಕ್ಷೆಗೆ ತಕ್ಕಂತೆ ಗಿಡಗಳು ಬೆಳೆಯದೆ ರೋಗದ ಗೂಡಾಗಿ ಮಾರ್ಪಟ್ಟಿದೆ. ಇದರ ನಡುವೆ ಸತತ ಮಳೆ ಹತ್ತಿ ಗಿಡಗಳ ಬೆಳವಣಿಗೆಗೆ ಮಾರಣಾಂತಿಕ ಪೆಟ್ಟು ನೀಡುತ್ತಿದೆ. 2ರಿಂದ 3 ಅಡಿ ಎತ್ತರ ಮಾತ್ರ ಬೆಳೆದಿದ್ದು, ಈಗ ಮೊಗ್ಗರಳಿ ಕಾಯಿ ಕಟ್ಟುವ ಹಂತದಲ್ಲಿದೆ. ಮೊಗ್ಗುಗಳಿಂದ ನಳನಳಿಸಬೇಕಾಗಿದ್ದ ಗಿಡಗಳು ಹಸಿ ತೇವಾಂಶದಿಂದ ಸೊರಗಿ ಹೋಗುತ್ತಿವೆ.

ADVERTISEMENT

ನಾಲವಾರ, ಲಾಡ್ಲಾಪುರ, ತರಕಸ್ ಪೇಟ್, ಕೊಲ್ಲೂರು, ಮಾರಡಗಿ, ಸನ್ನತ್ತಿ, ಹಲಕರ್ಟಿ, ಚಾಮನೂರು, ಬಳವಡ್ಗಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಹಲಕರ್ಟಿ, ಬಳವಡ್ಗಿ, ಕಡಬೂರು, ದೇವಾಪೂರ ಗ್ರಾಮಗಳಿಗೆ ಹೊಂದಿಕೊಂಡು ಹರಿಯುವ ಹಳ್ಳದ ಸುತ್ತಲಿನ ಜಮೀನುಗಳ ಬಹುತೇಕ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ. ನೀರಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಕಪ್ಪು ಮಣ್ಣಿನಲ್ಲಿ ಬಿತ್ತನೆ ಮಾಡಲಾಗಿರುವ ಹತ್ತಿ ಬೆಳೆಗಳಿಗೆ ರೋಗ ಆವರಿಸಿಕೊಳ್ಳುತ್ತಿದೆ. ನೀರು ಬಸಿದು ಹೋಗುವ ಮಸಾರಿ ಭೂಮಿಯಲ್ಲಿ ಸಹ ರೋಗದ ಛಾಯೆ ಕಂಡುಬರುತ್ತಿದೆ. ಹತ್ತಿ ವಾರ್ಷಿಕ ಬೆಳಯಾಗಿದ್ದು, ರೈತರ ವರ್ಷದ ಶ್ರಮಕ್ಕೆ ಸಂಚಕಾರ ಎದುರಾಗಿದೆ.

'ಕಷ್ಟಪಟ್ಟು ಬಿತ್ತಿದ ಹತ್ತಿ ಬೆಳೆ ನಿರು ಪಾಲಾಗುತ್ತಿದೆ. ಸತತ ಮಳೆ ನಮ್ಮನ್ನು ಇನ್ನಿಲ್ಲದಷ್ಟು ಹೈರಾಣಾಗಿಸುತ್ತಿದೆ. ಸಾಲ ಹೆಗಲೇರುವ ಆತಂಕ ಉಂಟಾಗುತ್ತಿದೆ' ಎಂದು ಹಲವು ರೈತರು ಅಳಲು ತೋಡಿಕೊಂಡರು.

'ಬಿತ್ತನೆಗೆ ಸುರಿದ ಹಣ, ಶ್ರಮ ಎಲ್ಲವೂ ನೀರಲ್ಲಿ ಕೊಚ್ಚಿ ಹೋಗುತ್ತಿದೆ. ಆಳುದ್ದ ಬೆಳಯಬೇಕಾಗಿದ್ದ ಹತ್ತಿ ಗಿಡಗಳು ನೆಲ ಬಿಟ್ಟು ಮೇಲೇಳುತ್ತಿಲ್ಲ. ಗಿಡಕ್ಕೆ ಕೇವಲ ನಾಲ್ಕೈದು ಕಾಯಿಗಳು ಕಾಣಿಸಿಕೊಳ್ಳುತ್ತಿವೆ' ಎಂದು ಹಲಕರ್ಟಿಯ ಕರಣಪ್ಪ ಇಸಬಾ, ಚೌಡಪ್ಪ ಗಂಜಿ, ಲಾಡ್ಲಾಪುರ ರೈತ ಸಾಬಣ್ಣ, ಶರಣಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.