ADVERTISEMENT

₹ 3,500 ದರೋಡೆ: ಮೂವರಿಗೆ 3 ವರ್ಷ ಜೈಲು, ದಂಡ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:41 IST
Last Updated 19 ಫೆಬ್ರುವರಿ 2026, 4:41 IST

ಕಲಬುರಗಿ: ನಗರದ ಹುಮನಾಬಾದ್ ರಿಂಗ್ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಅವರಿಂದ ₹ 3,500 ನಗದು, ಮೊಬೈಲ್ ಫೋನ್ ದರೋಡೆ ಮಾಡಿ ಪರಾರಿಯಾಗಿದ್ದ ಮೂವರಿಗೆ 5ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.

ಖಲೀಲ್ ಖಾಜಾ ಪಟೇಲ್, ಆಸೀಫ್ ಮೆಹಬೂಬ್ ಸಾಬ್ ಹಾಗೂ ಅವಿನಾಶ ಶುಭಾಷಚಂದ್ರ ಮಾಳಾ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

2016ರ ಜೂನ್ 3ರಂದು ಹುಮನಾಬಾದ್ ರಿಂಗ್ ರಸ್ತೆ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಎಂಎಫ್‌ ಡೇರಿಯ ಉದ್ಯೋಗಿ ಮಾರುತಿ ನರಸಿಂಗರಾವ್ ಅವರನ್ನು ಆಟೊದಲ್ಲಿ ಹಿಂದಿನಿಂದ ಬಂದು ಅಡ್ಡಗಟ್ಟಿದ ಅಪರಾಧಿಗಳು ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ಸಂದರ್ಭದಲ್ಲಿದ್ದ ಮಾರುತಿ ಜೊತೆಗಿದ್ದ ಅವರ ಸ್ನೇಹಿತರು ಜೂನ್ 5ರಂದು ಅಪರಾಧಿಗಳನ್ನು ಗುರುತಿಸಿದ್ದರು. ಪೊಲೀಸರು ಅಪರಾಧಿಗಳ ಬಳಿ ಇದ್ದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ADVERTISEMENT

ಗ್ರಾಮೀಣ ಠಾಣೆಯ ಪಿಐ ವಾಜೀದ್ ಪಟೇಲ್, ಪಿಎಸ್‌ಐ ಉದ್ದಂಡಪ್ಪ ಮಣ್ಣೂರಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಾದ ವಿವಾದ ಆಲಿಸಿದ ನ್ಯಾಯಾಧೀಶೆ ಲಲಿತಾ ಕುದರಿಮತಿ ಅವರು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷಕುಮಾರ್ ಲೋಖಂಡೆ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.