ADVERTISEMENT

100 ಆಕ್ಸಿಜನ್‌ ಕಾನ್ಸಂಟ್ರೇಟರ್‌, ಪ್ರತ್ಯೇಕ ಟ್ಯಾಂಕರ್‌: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 6:22 IST
Last Updated 4 ಮೇ 2021, 6:22 IST
ಸಚಿವ ಮುರುಗೇಶ ನಿರಾಣಿ
ಸಚಿವ ಮುರುಗೇಶ ನಿರಾಣಿ   

ಕಲಬುರ್ಗಿ: ‘ಆಮ್ಲಜನಕ ಪೂರೈಕೆಗೆ ಅನುಕೂಲವಾಗುವಂಥ ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ ಖರೀದಿಗೆ ಈಗಾಗಲೇ ಶಾಂಘೈ ಸರ್ಕಾರದ ಜತೆಗೆ ಮಾತನಾಡಿದ್ದೇನೆ. ಬುಧವಾರ 100 ಕಾನ್ಸಂಟ್ರೇಟರ್‌ಗಳು ಕಲಬುರ್ಗಿಗೆ ಬರಲಿವೆ. ಇನ್ನೂ 500 ಸರಬರಾಜು ಮಾಡಲು ಕೋರಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.‌

‘ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಿ, ಸಾವಿನ ಸಂಖ್ಯೆ ಕಡಿಮೆ ಮಾಡಲು ಆದ್ಯತೆ ನೀಡಿದ್ದೇನೆ. ಕಾನ್ಸಂಟ್ರೇಟರ್‌ನಿಂದ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಪೂರೈಕೆ ಮಾಡಲು ಅನುಕೂಲವಾಗುತ್ತದೆ. ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ತರಲಾಗುತ್ತದೆ’ ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿಶೇಷವಾಗಿ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲೆಗಾಗಿಯೇ ಒಂದು ಪ್ರತ್ಯೇಕ ವಾಹನ ಪಡೆಯಲು ಏಜೆನ್ಸಿ ಜತೆಗೆ ಮಾತನಾಡಿದ್ದೇನೆ. ಬುಧವಾರವೇ ವಾಹನ ಇಲ್ಲಿಗೆ ಬರಲಿದೆ. ಆಮ್ಲಜನಕ ತುಂಬಿದ ಈ ಟ್ಯಾಂಕರ್‌ ಇಡೀ ದಿನ ಇಲ್ಲೇ ಇರಲಿದೆ. ಖಾಲಿ ಆದ ತಕ್ಷಣ ಮತ್ತೆ ತುಂಬಿಕೊಂಡು ಬರಲಿದೆ. ಅಗತ್ಯದಷ್ಟು ಆಮ್ಲಜನಕ ಪೂರೈಸಲು ಬಳ್ಳಾರಿಯ ಜಿಂದಾಲ್‌ ಕಂಪನಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ’ ಎಂದರು.

ADVERTISEMENT

ಕಲಬುರ್ಗಿಯ ಮೂರು ಸಿಮೆಂಟ್‌ ಕಾರ್ಖಾನೆಗಳಲ್ಲಿ ಇರುವ ಎಲ್ಲ ಆಮ್ಲಜನಕ ಸಿಲಿಂಡರ್‌ಗಳನ್ನೂ ಕಲಬುರ್ಗಿಯ ಜಿಮ್ಸ್‌ಗೆ ನೀಡಲು ಸೂಚಿಸಿದ್ದೇನೆ. ಕಾರ್ಖಾನೆಗಳ ಮಾಲೀಕರೂ ಒಪ್ಪಿದ್ದಾರೆ. ಮಂಗಳವಾರವೇ ಇವು ಜಿಮ್ಸ್‌ ತಲುಪಲಿವೆ’ ಎಂದೂ ಹೇಳಿದರು.

ರಾಜಕೀಯ ಬೇಡ: ಚಾಮರಾಜನಗರದಲ್ಲಿ ಸಂಭವಿಸಿದ ಸಾವು ದುರದೃಷ್ಟಕರ. ಇದೇ ವಿಷಯ ಇಟ್ಟುಕೊಂಡು ಈಗ ರಾಜಕೀಯ ಮಾಡುವುದು ಬೇಡ. ಮುಂದೇನಾಗಬೇಕು ಎಂಬುದನ್ನು ನೋಡಬೇಕು. ಮುಖ್ಯಮಂತ್ರಿ ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.