ADVERTISEMENT

ಚಿತ್ತಾಪುರ: ವಿದೇಶದಿಂದ ಬಂದವರು 25 ಜನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 13:21 IST
Last Updated 26 ಮಾರ್ಚ್ 2020, 13:21 IST

ಚಿತ್ತಾಪುರ: ಕೊರೊನಾ ವೈರಸ್ ಹರಡುವಿಕೆ ಸರಪಳಿ ತುಂಡರಿಸಲು ಜನರು ಮನೆಯಿಂದ ಹೊರಗೆ ಬರಬಾರದು ಎಂದು ಸೆಕ್ಸೆನ್‌144 ಜಾರಿಯಾಗಿದೆ.

ಮಾ.27 ರಿಂದ ಮುಂದಿನ ಆದೇಶ ಬರುವವರೆಗೆ ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗುತ್ತಿದೆ ಎಂದು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಅವರು ತಿಳಿಸಿದ್ದಾರೆ.

ಹೆಚ್ಚಿನ ಜನರು ಒಂದೇ ಕಡೆಗೆ ಜಮಾವಣೆಯಾಗಬಾರದು ಎಂದು ಬಜಾರದಲ್ಲಿ ತರಕಾರಿ ಮತ್ತು ಹಣ್ಣು ಮಾರಾಟವನ್ನು ಬಂದ್ ಮಾಡಲಾಗಿದೆ.

ADVERTISEMENT

ತರಕಾರಿ, ಹಣ್ಣು ಮಾರಾಟಗಾರರು ತಮ್ಮ ತಮ್ಮ ಓಣಿಯಲ್ಲಿ ತಿರುಗಾಡಿ ಮಾರಾಟ ಮಾಡಬೇಕು. ನಾಗರಿಕರು ಮಾರುಕಟ್ಟೆಗೆ ಬರಬಾರದು ಎಂದು ಅವರು ಹೇಳಿದ್ದಾರೆ. ಕಿರಾಣಿ ಅಂಗಡಿಗಳನ್ನು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ತೆರೆಯಬೇಕು. ನಾಗರಿಕರು ಜನದಟ್ಟಣೆ ಆಗದಂತೆ ಎಚ್ಚರಿಕೆ ವಹಿಸಿ ಮನೆಯಿಂದ ಒಬ್ಬರು ಬಂದು ಅಗತ್ಯ ಸಾಮಾಗ್ರಿ ಖರೀದಿಸಬೇಕು ಎಂದು ಅವರು ತಿಳಿಸಿದ್ದಾರೆ.

ಕಿರಾಣಿ ಅಂಗಡಿ, ಮೆಡಿಕಲ್ ಅಂಗಡಿ ಹೊರತುಪಡಿಸಿ ಎಲ್ಲಾ ಅಂಗಡಿಗಳು ಬಂದ್ ಇರುತ್ತವೆ. ಅನಗತ್ಯವಾಗಿ ಸಾರ್ವಜನಿಕರು ಮನೆಯಿಂದ ಹೊರಗೆ ಬಂದು ಓಡಾಡಿದರೆ ಸರ್ಕಾರದ ಆದೇಶದಂತೆ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ವಿದೇಶದಿಂದ ಬಂದವರು 25 ಜನ

ವಿದೇಶ ಪ್ರವಾಸ ಮುಗಿಸಿಕೊಂಡು ಚಿತ್ತಾಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಒಟ್ಟು 25 ಜನರು ಆಗಮಿಸಿದ್ದಾರೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಹೇಳಿದ್ದಾರೆ.

ವಿದೇಶದಿಂದ ಬಂದವರು ಕೊರೊನಾ ವೈರಸ್ ಹರಡುವ ಕುರಿತು ಮುಂಜಾಗ್ರತೆ ವಹಿಸಬೇಕು. ಅನಾರೋಗ್ಯ ಕಂಡ ಬಂದರೆ ಮಾಹಿತಿ ನಿಡಬೇಕು. ಮನೆಯಿಂದ ಹೊರಗೆ ಬರಬಾರದು ಎಂದು ತಿಳಿಸಲಾಗಿದೆ. ಅವರ ಮನೆಯ ಮೇಲೆ ನಿಗಾ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.

ಹೊರ ರಾಜ್ಯ, ಜಿಲ್ಲೆಗಳಿಂದ 1095 ಜನ

ತಾಲ್ಲೂಕಿನ ವಿವಿಧ ಹೋಬಳಿಗಳ ವ್ಯಾಪ್ತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಮತ್ತು ಬೇರೆ ರಾಜ್ಯಗಳಿಂದ ಒಟ್ಟು 1095 ಜನರು ಆಗಮಿಸಿದ್ದಾರೆ ಎಂದು ತಹಶೀಲ್ದಾರ್ ಉಮಾಕಾಂತ ಅವರು ಹೇಳಿದ್ದಾರೆ. ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬೆಂಗಳೂರಿನಿಂದ 620 ಜನರು, ಬೇರೆ ಜಿಲ್ಲೆಗಳಿಂದ 19 ಜನರು ಹಾಗೂ ಬೇರೆ ರಾಜ್ಯಗಳಿಂದ 456 ಜನರು ಆಗಮಿಸಿದ್ದಾರೆ.

ಎಲ್ಲರ ಮಾಹಿತಿ ಕಲೆ ಹಾಕಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಆರೋಗ್ಯ ಸಿಬ್ಬಂದಿಯಿಂದ ಮನೆಮನೆ ಭೇಟಿ ನೀಡಿ ಆರೋಗ್ಯ ಮಾಹಿತಿ ಕಲೆ ಹಾಕುವಂತೆ ಸೂಚಿಸಲಾಗಿದೆ ಎಮದು ಅವರು ತಿಳಿಸಿದ್ದಾರೆ.

ಅಂಗಡಿಗಳಲ್ಲಿ ಅಂತರ ಇರಲಿ'

ಮೆಡಿಕಲ್ ಮತ್ತು ಕಿರಾಣಿ ಅಂಗಡಿಗೆ ಬರುವ ಗ್ರಾಹರು ಒಂದು ಮೀಟರ್ ಅಂತರ ಕಾಪಾಡಲೆಂದು ಪುರಸಭೆಯಿಂದ ಅಂಗಡಿಗಳ ಮುಂದೆ ಬಿಳಿ ಬಣ್ಣದಿಂದ ಗುರುತು ಹಾಕಲಾಗಿದೆ. ಜನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕೀತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.