ಕಲಬುರ್ಗಿ: ಇಲ್ಲಿನ ಪತ್ರಿಕಾ ಭವನದಲ್ಲಿ ಜಿಲ್ಲೆಯ ಸಾಹಿತಿ ಹಾಗೂ ಕಲಾವಿದರಿಗಾಗಿ ಆಯೋಜಿಸಿದ ಕೋವಿಡ್ ಲಸಿಕಾ ಅಭಿಯಾನಕ್ಕೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಕೊರೊನಾದ ವಿರುದ್ಧ ಗೆಲುವು ಸಾಧಿಸಲು ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಕೋವಿಡ್ ಸಂಪೂರ್ಣವಾಗಿ ತೊಲಗುವವರೆಗೂ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಭಯ ಬಿಟ್ಟು ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ’ ಎಂದರು.
ಕ್ರಿಯಾಶೀಲ ಗೆಳೆಯರ ಬಳಗದ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾದಿಕಾರದ ಸದಸ್ಯ ಸುರೇಶ ಬಡಿಗೇರ, ಶರಣರಾಜ್ ಛಪ್ಪರಬಂದಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಹಿರಿಯ ವೈದ್ಯ ಡಾ.ಮಲ್ಹಾರರಾವ್ ಮಲ್ಲೆ, ಸೂರಜ್ ತಿವಾರಿ, ಮುಡುಬಿ ಗುಂಡೇರಾವ, ಕಲ್ಯಾಣಕುಮಾರ ಶೀಲವಂತ, ಶ್ರೀನಿವಾಸ ದೇಸಾಯಿ ಹಲವರು ಇದ್ದರು.
ಲಸಿಕೆ ಪಡೆದವರಿಗೆ ಸಮಾಜ ಸೇವಕರಾದ ಮಾಲಾ ಕಣ್ಣಿ ಮತ್ತು ಮಾಲಾ ದಣ್ಣೂರ ನೇತೃತ್ವದ ನಾಲ್ಕು ಚಕ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಸಿಗಳನ್ನು ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.