ADVERTISEMENT

‘ಸರಣಿ ಸ್ಫೋಟಕ ಪಟಾಕಿ ನಿಷೇಧ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 14:27 IST
Last Updated 3 ನವೆಂಬರ್ 2018, 14:27 IST
ಆರ್.ವೆಂಕಟೇಶಕುಮಾರ್
ಆರ್.ವೆಂಕಟೇಶಕುಮಾರ್   

ಕಲಬುರ್ಗಿ: ‘ಸುಪ್ರೀಂಕೋರ್ಟ್ ತೀರ್ಪಿನನ್ವಯ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿತದಿಂದ ಉಂಟಾಗುವ ಘನತ್ಯಾಜ್ಯ ವಸ್ತುಗಳ ಮಾಲಿನ್ಯ ತಡೆಯಲು ಸರಣಿ ಸ್ಫೋಟಕ ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.

‘ದೀಪಾವಳಿ ಹಬ್ಬದ ಅಂಗವಾಗಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ನಿಗದಿತ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸುವಂತೆ ನೋಡಿಕೊಳ್ಳುವುದು ಹಾಗೂ ನಿಷೇಧಿತ ಪಟಾಕಿ ಮಾರಾಟವನ್ನು ತಡೆಗಟ್ಟುವುದು ಪೋಲಿಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ತಪ್ಪಿದಲ್ಲಿ ಸಂಬಂಧಿಸಿದ ಠಾಣಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಕಠಿಣ ಕ್ರಮ: ‘ನಿಷೇಧಿತ ಪಟಾಕಿ ಹೊರತುಪಡಿಸಿ ಇನ್ನುಳಿದ ಸ್ಫೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡಬೇಕು. ಪರವಾನಗಿ ಹೊಂದದ ಮಾರಾಟಗಾರರು ಪಟಾಕಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಮೇಲ್ವಿಚಾರಣೆ: ‘ಹಬ್ಬ ಆರಂಭವಾಗುವ 7 ದಿನ ಮೊದಲು ಹಾಗೂ ಹಬ್ಬದ ನಂತರದ 7 ದಿನಗಳು ಸೇರಿದಂತೆ ಒಟ್ಟು 14 ದಿನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪಟಾಕಿ ಸಿಡಿಸುವುದರ ಮೇಲೆ ಮೇಲ್ವಿಚಾರಣೆ ನಡೆಸಬೇಕು. ಜಿಲ್ಲೆಯ ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮೂಹಿಕವಾಗಿ ಪಟಾಕಿ ಸಿಡಿಸುವ ಸಾಧ್ಯತೆ ಬಗ್ಗೆಯೂ ಸ್ಥಳೀಯ ಆಡಳಿತದವರು ಪರಿಶೀಲಿಸಿ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.