ADVERTISEMENT

ಮದ್ಯದ ಅಮಲಿನಲ್ಲಿ ಹಾರಿಸಿದ ಗುಂಡಿನಿಂದ ಸ್ನೇಹಿತನಿಗೆ ಗಾಯ

ಪಾರ್ಟಿ ವೇಳೆ ಗಲಾಟೆ: ದಿಕ್ಕು ತಪ್ಪಿಸಲು ಕಟ್ಟು ಕಥೆ ಕಟ್ಟಿದ್ದ ಗಾಯಾಳು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:59 IST
Last Updated 26 ಸೆಪ್ಟೆಂಬರ್ 2024, 15:59 IST
ಶಾಂತಪ್ಪ
ಶಾಂತಪ್ಪ    

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕಡಗಂಚಿಯ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ಪಾರ್ಟಿ ಮಾಡುತ್ತಿದ್ದಾಗ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್‌ನಿಂದ ಹಾರಿಸಿದ ಗುಂಡು ತಗುಲಿ ಆತನ ಸ್ನೇಹಿತ ಗಾಯಗೊಂಡಿದ್ದಾನೆ.

ಗುಂಡೇಟಿನಿಂದ ಕಡಗಂಚಿಯ ಶಾಂತಪ್ಪ ಈರಣ್ಣ ಅವರ ಎಡ ರಟ್ಟೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಮಾಳಪ್ಪ ಪೂಜಾರಿ ಮತ್ತು ಕಾಂತಪ್ಪ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಾಂತಪ್ಪ, ಕಾಂತಪ್ಪ ಮತ್ತು ಮಾಳಪ್ಪ ಅವರು ಸ್ನೇಹಿತರಾಗಿದ್ದಾರೆ. ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಕಾಂತಪ್ಪ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿ, ಶಾಂತಪ್ಪನ ರಟ್ಟೆಗೆ ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಕಥೆ ಕಟ್ಟಿದ ಶಾಂತಪ್ಪ: ಗಾಯಾಳು ಶಾಂತಪ್ಪ, ನಡೆದ ಘಟನೆಯನ್ನು ಮರೆಮಾಚಲು ಹುಸಿ ಕಥೆ ಕಟ್ಟಿದ್ದ. ‘ಊಟದ ಬಳಿಕ ಬಯಲು ಬಹಿರ್ದೆಸೆಗೆ ನಡೆದುಕೊಂಡು ಹೋಗುತ್ತಿದ್ದೆ. ಪಟಾಕಿ ಸಿಡಿದಂತೆ ಶಬ್ದವಾಗಿ ನನ್ನ ಎಡಗೈ ರಟ್ಟೆಗೆ ಗಾಯವಾಗಿತ್ತು. ಗುಂಡು ಹಾರಿಸಿ ಕೊಲೆಗೆ ಯತ್ನಿಸಿದವರು ತೊಗರಿ ಹೊಲದಲ್ಲಿ ಓಡಿ ಹೋದರು’ ಎಂದು ಶಾಂತಪ್ಪ ನರೋಣ ಠಾಣೆಯ ಪೊಲೀಸರಿಗೆ ಹೇಳಿಕೆ ಕೊಟ್ಟು, ದೂರು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂವರ ವಿರುದ್ಧ ಬೀದರ್‌ನ ಮಂಠಾಳ ಪೊಲೀಸ್ ಠಾಣೆಯಲ್ಲಿ ದರೋಡೆ ಸೇರಿ ವಿವಿಧ ಪ್ರಕರಣಗಳು ದಾಖಲಾಗಿವೆ. ಅಕ್ರಮ ಪಿಸ್ತೂಲ್ ಬಳಕೆ ಆರೋಪದಡಿ ನರೋಣಾ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಳಂದ ಸಿಪಿಐ ಪ್ರಕಾಶ್ ಯಾತನೂರು, ನರೋಣಾ ಪಿಎಸ್ಐ ಸಿದ್ದರಾಮ ಅವರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.