ADVERTISEMENT

ಮಕ್ಕಳಿಗೆ ವಿಷ ಉಣಿಸಿ ಸಾಯಿಸಿದ್ದ ತಂದೆಯೂ ಆತ್ಮಹತ್ಯೆ

ಮೂರು ಜೀವಗಳನ್ನು ಬಲಿ ಪಡೆದ ಹೊಸ ವರ್ಷದ ಕೇಕ್‌!

ಜಗನ್ನಾಥ ಡಿ.ಶೇರಿಕಾರ
Published 4 ಜನವರಿ 2020, 11:37 IST
Last Updated 4 ಜನವರಿ 2020, 11:37 IST
ಚಿಂಚೋಳಿ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು
ಚಿಂಚೋಳಿ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು   

ಚಿಂಚೋಳಿ: ತಾಲ್ಲೂಕಿನ ಭೈರಂಪಳ್ಳಿ ತಾಂಡಾದ ಇಬ್ಬರು ಕಂದಮ್ಮಗಳಿಗೆ ತಂದೆಯೇ ವಿಷ ಉಣಿಸಿ ಕೊಲೆಗೈಯ್ದ ಪ್ರಕರಣ ಪ್ರಮುಖ ತಂದೆಯ ಆತ್ಮಹತ್ಯೆಯಲ್ಲಿ ಅಂತ್ಯ ಕಂಡಿದೆ.

ಪ್ರಕರಣದ ಆರೋಪಿಯಾಗಿದ್ದ ಸಂಜೀವ ರಾಠೋಡ್‌ ಶನಿವಾರ ತಾಂಡಾದಿಂದ ಅಂದಾಜು 20 ಕಿ.ಮೀ ಅಂತರದಲ್ಲಿರುವ ತಾಂಡೂರಿನಲ್ಲಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದರು.

ಹೊಸ ವರ್ಷದ ಕೇಕ್‌ ತಂದ ಆಪತ್ತು: ಹೈದರಾಬಾದ್‌ನ ಸನತ್ ನಗರದಲ್ಲಿ ವಾಸವಿದ್ದ ಕುಟುಂಬಕ್ಕೆ ಪಕ್ಕದ ಮನೆಯವರು ಹೊಸ ವರ್ಷದ ಕೇಕ್‌ ತಂದುಕೊಟ್ಟಿದ್ದರು. ಇದುವೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಕೇಕ್‌ ತಂದುಕೊಟ್ಟಿದ್ದು ಹೆಣ್ಣು ಮಕ್ಕಳು. ನಾನು ಹೆಣ್ಣು ಮಕ್ಕಳ ಜತೆಗೆ ಮಾತನಾಡಿದರೂ ನನ್ನ ಮೇಲೆ ಅವನು ಸಂಶಯಪಡುತ್ತಿದ್ದ ಎಂದು ಮೃತನ ಪತ್ನಿ ನಿರ್ಮಲಾ ರಾಠೋಡ ತಿಳಿಸಿದರು.

ADVERTISEMENT

ಮೂವರು ಬಲಿಯಾದ ಪ್ರಕರಣದ ಸುತ್ತಲೂ ಅನೈತಿಕ ಸಂಬಂಧದ ಹುತ್ತವಿದೆ. ಗುರುವಾರ ಪತಿ ಪತ್ನಿ ಮಧ್ಯೆ ಜಗಳವಾಗಿದೆ. ತವರು ಮನೆಯವರಿಗೆ ಕರೆ ಮಾಡಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾನೆ. ಆಗ ತವರು ಮನೆಯವರು ಹೋಗಿ ಮಗಳನ್ನು ಕರೆದುಕೊಂಡು ಬರುವಾಗ ಮಕ್ಕಳಿಗೆ ಚಾಕೊಲೇಟ್‌ ಕೊಡಿಸುವುದಾಗಿ ಹೇಳಿ ಬೈಕ್‌ ಮೇಲೆ ಕೂಡಿಸಿಕೊಂಡು, ನೀವು ನಡೆಯಿರಿ ನಾನು ಹಿಂದೆ ಬರುತ್ತೇನೆ ಎಂದು ಮಕ್ಕಳನ್ನು ಕರೆದೊಯ್ದನವನು ಹೀಗೆ ಮಾಡಿದ್ದಾನೆ ಎಂದು ಕಣ್ಣೀರಿಟ್ಟರು ನಿರ್ಮಲಾ.

ಎಸ್ಪಿ ದಿಗ್ಭ್ರಮೆ: ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಎಸ್ಪಿ ಯಡಾ ಮಾರ್ಟಿನ್, ‘ನನ್ನ ಸೇವೆಯಲ್ಲಿ ವಿಚಿತ್ರವಾದ ಮೊದಲ ಪ್ರಕರಣವಿದು. ಮಕ್ಕಳಿಗೆ ವಿಷವುಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು ನೋಡಿದ್ದು ನನ್ನ ಸೇವೆಯಲ್ಲಿ ಇದೇ ಮೊದಲನೇಯದು’ ಎಂದರು.

ಅವರು ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ಮರಣೋತ್ತರ ಪರೀಕ್ಷೆ ಪರಿಶೀಲಿಸಿ ಅಲ್ಲಿಂದ ಘಟನಾ ಸ್ಥಳವಿರುವ ಭೈರಂಪಳ್ಳಿ ತಾಂಡಾದ ಖೀರು ನಾಯಕ ಅವರ ಹೊಲಕ್ಕೆ ತೆರಳಿ ಪರಿಶೀಲಿಸಿದರು. ಅವರೊಂದಿಗೆ ಡಿವೈಎಸ್ಪಿ ಕೆ.ಬಸವರಾಜ, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ಪಾಟೀಲ, ಮಿರಯಾಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸಂತೋಷ ರಾಠೋಡ, ಕುಂಚಾವರಂ ಠಾಣೆಯ ವಿಜಯಕುಮಾರ ನಾಯಕ್‌, ಚಿಂಚೋಳಿ ಠಾಣೆಯ ರಾಜಶೇಖರ ರಾಠೋಡ ಇದ್ದರು.

ಎಸ್‌ಐ ಕರೆ ಸ್ವೀಕರಿಸಿದ್ದ ಸಂಜೀವ: ಶುಕ್ರವಾರ ರಾತ್ರಿ ಮಕ್ಕಳನ್ನು ಕೊಂದಿದ್ದ ಮೇಲೆ ಮೊಬೈಲ್‌ ಬಂದ್‌ ಆಗಿತ್ತು. ಆದರೆ ಒಮ್ಮೊಮ್ಮೆ ಚಾಲು ಮಾಡಿ ಬಂದ್‌ ಮಾಡುತ್ತಿದ್ದ. ಈ ಹಂತದಲ್ಲಿಯೇ ಶನಿವಾರ ಬೆಳಿಗ್ಗೆ ಆರೋಪಿ ಸಂಜೀವ ರಾಠೋಡ ಮಿರಯಾಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸಂತೋಷ ರಾಠೋಡ ಕರೆ ಸ್ವೀಕರಿಸಿದ್ದ.

ಇದಾದ ಕೆಲ ಸಮಯದಲ್ಲಿಯೇ ಅತನನ್ನು ಪತ್ತೆಗೆ ಜಾಲ ಬೀಸಲಾಗಿತ್ತು. ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ದೃಢಪಟ್ಟ ಮೇಲೆ ಅವನನ್ನು ಸುಲಭವಾಗಿ ಬಂಧಿಸಬಹುದೆಂದು ಪೊಲೀಸರು ಭಾವಿಸಿದ್ದರು ಆದರೆ ಕೆಲ ಸಮಯದಲ್ಲಿಯೇ ಅವನು ರೈಲು ಹಳಿಗೆ ತಲೆಕೊಟ್ಟ ಸಂಗತಿ ಬಯಲಾಗಿದೆ.

ಶಾಂತಿಯುತ ಅಂತ್ಯಕ್ರಿಯೆ: ತಂದೆಯಿಂದ ಕೊಲೆಯಾದ ನತದೃಷ್ಟ ಮಕ್ಕಳಿಗೆ (ಹೂಳುವ ಮೂಲಕ) ಮೊದಲು ಅಂತ್ಯಕ್ರಿಯೆ ನಡೆಸಲಾಯಿತು. ನಂತರ ತಂದೆ ಸಂಜೀವ ರಾಠೋಡ (ಶವ ಸುಟ್ಟು) ಅಂತ್ಯಕ್ರಿಯೆಯೂ ನಡೆಯಿತು. ಮಕ್ಕಳು ಹಾಗೂ ಪತಿಯನ್ನು ಕಳೆದುಕೊಂಡ ಪತ್ನಿಯ ಅಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.