ADVERTISEMENT

ಲಂಚ: ಪುರಸಭೆ ಮುಖ್ಯಾಧಿಕಾರಿಗೆ 6 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 3:52 IST
Last Updated 14 ನವೆಂಬರ್ 2020, 3:52 IST

ಕಲಬುರ್ಗಿ: 2013ರಲ್ಲಿ ಕೆಲಸ ಕಾಯಂ ಮಾಡಿ ಕೊಡುವುದಾಗಿ ಹೇಳಿ ₹ 10 ಸಾವಿರ ಲಂಚ ಪಡೆದಿದ್ದ, ಅಂದಿನ ಸೇಡಂ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಮಡಿವಾಳಪ್ಪ ಶಿವಪೂಜೆ ಅವರಿಗೆ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸೆಷನ್ಸ್ ನ್ಯಾಯಾಲಯವು ಗುರುವಾರ ಆರು ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.‌‌

ಈ ಅಧಿಕಾರಿ 2013ರಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದರು. ಏಳು ವರ್ಷಗಳ ಬಳಿಕ ಅವರಿಗೆ ಶಿಕ್ಷೆಯಾಗಿದೆ.

‘ಸೇಡಂ ಪುರಸಭೆಯ ಆಶ್ರಯ ಮನೆ ಶಾಖೆಯ ಪ್ರಭಾರಿ ಆಗಿದ್ದ ನಮ್ಮ ತಂದೆಯವರ ಕೆಲಸವನ್ನು ಕಾಯಂ ಮಾಡಿಕೊಡುವುದಾಗಿ ನಂಬಿಸಿ, ಅವರಿಂದ ₹ 10 ಸಾವಿರ ಲಂಚ ಕೇಳಿದ್ದಾರೆ‌’ ಎಂದು ಆರೋಪಿಸಿ ಸೇಡಂ ನಿವಾಸಿ ಶ್ರೀನಿವಾಸ ಹನುಮಾ ನಾಯಕ ‌ಎಂಬುವವರು ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸ್ ಇನ್‌ಸ್ಪೆಕ್ಟರ್‌ ಜೇಮ್ಸ್ ಮಿನೇಜಸ್ ಅವರು ದೂರು ದಾಖಲಿಸಿಕೊಂಡಿದ್ದರು. ಕಲಬುರ್ಗಿಯ ಉಪನೋಂದಣಾಧಿಕಾರಿ ಕಚೇರಿ ಮುಂದೆ ಆರೋಪಿಯು ₹ 5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ. ನಂತರ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಟಿ.ಆರ್. ರಾಘವೇಂದ್ರ ಅವರು ಪ್ರಕರಣದ ತನಿಖೆ ನಡೆಸಿ, 2016ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸೆಷನ್ಸ್‌ ನ್ಯಾಯಾಧೀಶರಾದ ಆರ್.ಜೆ. ಸತೀಶಸಿಂಗ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಕ್ರಮಬದ್ಧವಾದ ಮಾಹಿತಿಯನ್ನು ಅಬ್ದುಲ್ ನಬಿ ಅವರು ತಿಳಿಸಿ, ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದಲ್ಲಿ ಒದಗಿಸಲು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಲೋಕಾಯುಕ್ತದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎ.ಎಸ್. ಚಾಂದಕವಟೆ ಅವರು ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.