ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ,ಯಾದಗಿರಿ ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆಯಾಗಿದ್ದು, ನದಿ, ಹಳ್ಳ, ಕೊಳ್ಳಗಳು ಅಬ್ಬರಿಸಿ ಹರಿದಿವೆ. ಜೇವರ್ಗಿ ತಾಲ್ಲೂಕಿನಲ್ಲಿ ಹಳ್ಳದ ನೀರು ಹರಿದಿದ್ದರಿಂದ ರೈತರ 5,800 ಪಪ್ಪಾಯ ಗಿಡಗಳು ನೆಲಕಚ್ಚಿವೆ. ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗಿತ್ತು.
ಕಲಬುರಗಿ ನಗರ, ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆಯಾಯಿತು. ಜೇವರ್ಗಿ ತಾಲ್ಲೂಕಿನ ಬಿರಾಳ (ಕೆ) ಗ್ರಾಮದಲ್ಲಿ ನೀರು ತೋಟಕ್ಕೆ ನುಗ್ಗಿದ್ದು, ಕಟಾವಿಗೆ ಬಂದಿದ್ದ ಪಪ್ಪಾಯ ಗಿಡಗಳು ಸಂಪೂರ್ಣ ನೆಲಕಚ್ಚಿವೆ.
ಇದರಿಂದಾಗಿ ರೈತರಿಗೆ ₹35 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಭೂಮಿಯನ್ನು ಬಾಡಿಗೆಗೆ ಪಡೆದು ಪಪ್ಪಾಯ ನೆಟ್ಟಿದ್ದ ರೈತ ಖಾಜಾ ಹುಸೇನಿ ಅಲವತ್ತುಕೊಂಡರು. ಜೇವರ್ಗಿ ತಾಲ್ಲೂಕಿನ ಕೋಳಕೂರ, ಹರವಾಳ ಗ್ರಾಮದಲ್ಲಿಯೂ ಹತ್ತಿ ಬೆಳೆಗೆ ನೀರು ನುಗ್ಗಿದೆ.
ಬೆಳೆ ಹಾನಿಯಿಮದಾಗಿ ಕೃಷಿ ಲಾಭದ ನಿರೀಕ್ಷೆಯಲ್ಲಿದ್ದ ಈ ಭಾಗದ ಅನೇಕ ರೈತರ ನಿರೀಕ್ಷೆಗಳು, ಹುಸಿಯಾಗಿವೆ.
ಜಿಲ್ಲೆಯ ಕಾಳಗಿ–ಮಲಘಾಣ ನಡುವಿನ ರಸ್ತೆಯ ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡಿತು. ಬೆಣ್ಣೆತೊರಾ ಜಲಾಶಯದಿಂದ 8,400 ಕ್ಯೂಸೆಕ್ ನೀರು ಬಿಡಲಾಗಿದ್ದು, ನದಿ ಪಾತ್ರದಲ್ಲಿ ಹೊಲ, ಗ್ರಾಮಗಳು ಜಲಾವೃತವಾಗಿವೆ.
ನದಿ ದಂಡೆಯ ಹಳೆ ಹೆಬ್ಬಾಳ, ಕಣಸೂರ, ಮಲಘಾಣ, ತೆಂಗಳಿ, ಕಲಗುರ್ತಿ ಗ್ರಾಮಗಳ ಹೊಲ, ಮನೆ, ಗುಡಿ ಗುಂಡಾರ, ಹೋಟೆಲ್, ಅಂಗಡಿ, ಸಮುದಾಯ ಭವನಗಳಿಗೆ ನೀರು ನುಗ್ಗಿ ಹಾನಿ ಮಾಡಿದೆ. ಡೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾರಿ ಬಂದ್ ಆಗಿದ್ದರಿಂದ ಶಾಲೆಗೆ ರಜೆ ನೀಡಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಮಾಂಜ್ರಾ, ಕಾರಂಜಾ ನದಿಗಳು ಮೈದುಂಬಿ ಹರಿಯುತ್ತಿವೆ. ಔರಾದ್ ತಾಲ್ಲೂಕಿನ ಎಕಂಬಾ ಕೆರೆ ಕೋಡಿ ಹರಿದಿದೆ. ಎಕಂಬಾ ತಾಂಡಾದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಜೋರು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.