ಕಲಬುರಗಿ: ‘ಗಡಿಭಾಗದ ಪ್ರದೇಶಾಭಿವೃದ್ಧಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ನಗರದಲ್ಲಿ ಕಸಾಪ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ‘ಮುಖಾಮುಖಿ’ಯಲ್ಲಿ ಅವರು ಮಾತನಾಡಿದರು.
‘ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆರು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡ 19 ಜಿಲ್ಲೆಗಳ 63 ತಾಲ್ಲೂಕುಗಳು ಬರುತ್ತವೆ. ಈ ಪ್ರದೇಶಗಳಲ್ಲಿ ಹತ್ತಾರು ಸಮಸ್ಯೆಗಳಿವೆ. ಸರ್ಕಾರಗಳು ಪಕ್ಷಾತೀತವಾಗಿ ಸ್ಪಂದಿಸುವ ಅಗತ್ಯವಿದೆ. ನಾನು ಅಧ್ಯಕ್ಷನಾದ ವರ್ಷದಲ್ಲಿ ಮೂರು ತಿಂಗಳು ಚುನಾವಣಾ ನೀತಿ ಸಂಹಿತೆಯಲ್ಲಿ ಕಳೆದಿದ್ದು, ಮಿಕ್ಕ 9 ತಿಂಗಳಲ್ಲಿ 1 ಲಕ್ಷ ಕಿಲೊ ಮೀಟರ್ ಪ್ರವಾಸ ಮಾಡಿ, ಗಡಿ ಪ್ರದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ’ ಎಂದರು.
‘2010–11ರಿಂದ ಶುರುವಾದ ಈ ಪ್ರಾಧಿಕಾರಕ್ಕೆ ಸರ್ಕಾರದಿಂದ ಈತನಕ ಒಟ್ಟಾರೆ ₹600 ಕೋಟಿಗಳಷ್ಟು ಅನುದಾನ ದೊರೆತಿದೆ. ಪ್ರಸಕ್ತ ಸಾಲಿನಲ್ಲಿ ₹15 ಕೋಟಿ ಅನುದಾನ ದೊರೆತಿದೆ. ಅದರಲ್ಲಿ ₹3.50 ಕೋಟಿ ಆಡಳಿತಾತ್ಮಕ ವೆಚ್ಚಕ್ಕೆ ಮೀಸಲು. ಇನ್ನುಳಿದ ₹11.50 ಕೋಟಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಪ್ರಾಧಿಕಾರದಿಂದ ಈತನಕ ಕಲಬುರಗಿ ಜಿಲ್ಲೆಯಲ್ಲಿ ₹20 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ವಿವರಿಸಿದರು.
‘ಈ ಸಲ 458 ಅರ್ಜಿಗಳು ಬಂದಿದ್ದು, ರಸ್ತೆ ನಿರ್ಮಾಣ, ಕಟ್ಟಡ, ಸಾಂಸ್ಕೃತಿಕ ಕಾರ್ಯಕ್ರಮದಂಥ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ಅನುದಾನ ನಿಲ್ಲಿಸಲಾಗಿದೆ. ಆದ್ಯತೆಯ ಕೆಲಸಗಳಿಗೆ ಹಣ ವಿನಿಯೋಗಿಸಲಾಗುತ್ತಿದೆ. ಗಡಿ ಪ್ರದೇಶದ ಅಭಿವೃದ್ಧಿಗಾಗಿ ಸಿಎಸ್‌ಆರ್ ನಿಧಿಯನ್ನೂ ಪಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
‘ರಾಜ್ಯದ ಗಡಿಭಾಗದ ಸಮಸ್ಯೆಗಳ ಜೊತೆಗೆ ರಾಜ್ಯದೊಂದಿಗೆ ಗಡಿ ಹಂಚಿಕೊಂಡ ನೆರೆ ರಾಜ್ಯಗಳಲ್ಲಿರುವ ಕನ್ನಡಿಗರ ಸಮಸ್ಯೆ, ಕನ್ನಡ ಶಾಲೆಗಳ ಸಮಸ್ಯೆಗಳಿಗೂ ಪ್ರಾಧಿಕಾರ ಸ್ಪಂದಿಸಬೇಕಿದೆ. ಅಕ್ಕಲಕೋಟೆ, ಜತ್ತ, ಸೊಲ್ಲಾಪುರ, ಗೋವಾದಂಥ ಹೊರನಾಡಿನಲ್ಲಿ 853 ಹಳ್ಳಿಗಳಲ್ಲಿ 658 ಕನ್ನಡ ಶಾಲೆಗಳಿದ್ದು, 1,09,360 ಮಕ್ಕಳು ಓದುತ್ತಿದ್ದಾರೆ. ಅವರನ್ನೂ ತಲುಪಲು ನಮ್ಮ ಸರ್ಕಾರ ಪ್ರಯತ್ನಿಸಿದೆ. ಮೊದಲ ಹಂತದಲ್ಲಿ ಅಲ್ಲಿನ ಶಾಲೆಗಳಿಗೆ ಕನ್ನಡ ಪಠ್ಯಪುಸ್ತಕ, ಕನ್ನಡ ದಿನಪತ್ರಿಕೆಗಳನ್ನು ತಲುಪಿಸುವ ಜೊತೆಗೆ 114 ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಸೇವೆಯನ್ನು ‘ಅತಿಥಿ’ಗಳ ರೂಪದಲ್ಲಿ ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸಾಹಿತಿ ಎ.ಕೆ.ರಾಮೇಶ್ವರ, ಸಾಹಿತಿ ಸ್ವಾಮಿರಾವ ಕುಲಕರ್ಣಿ, ಡಾ.ಎಸ್.ಬಿ.ಕಾಮರೆಡ್ಡಿ ಮಾತನಾಡಿದರು. ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.