
ಕಲಬುರಗಿ: ‘ಬಸವಕಲ್ಯಾಣವು ಜಾಗತಿಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕೇಂದ್ರವಾಗಿದ್ದು, ಇದನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಅಭಿವೃದ್ಧಿಪಡಿಸಬೇಕು ಮತ್ತು ಪ್ರಚುರಪಡಿಸಬೇಕು’ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಮಂಗಳವಾರ ಬಸವಕಲ್ಯಾಣದ ದಿವ್ಯಜೀವನ ಚಾರಿಟಬಲ್ ಟ್ರಸ್ಟ್‌ನ ಶರಣ ಭಾರತ ಸಂಶೋಧನೆ ಮತ್ತು ತರಬೇತಿ ಕೇಂದ್ರ ಹಾಗೂ ಸಿಯುಕೆ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕಿ ಅವರು ಮಾತನಾಡಿದರು.
‘ಬಸವೇಶ್ವರರ ಶರಣ ತತ್ವಶಾಸ್ತ್ರ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಕರ್ನಾಟಕ ಸರ್ಕಾರವು ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ನಿರ್ಮಿಸಲು ಸುಮಾರು ₹ 800 ಕೋಟಿ ಖರ್ಚು ಮಾಡುತ್ತಿದೆ. ನಮ್ಮ ಪ್ರಧಾನಿ ಯಾವಾಗಲೂ ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಎಂದು ಹೇಳುತ್ತಾರೆ. ಇದು ಅತ್ಯಂತ ಸಂಭಾವ್ಯ ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ, ನಾವು ಸಾಂಸ್ಕೃತಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಈ ಒಪ್ಪಂದದ ಮೂಲಕ ನಮ್ಮ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ಶರಣ ಭಾರತ ಸಂಶೋಧನೆ ಮತ್ತು ತರಬೇತಿ ಕೇಂದ್ರದೊಂದಿಗೆ ಕೂಡಿ ಕೆಲಸ ಮಾಡಲಿದ್ದು ಬಸವಕಲ್ಯಾಣದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ’ ಎಂದು ಅವರು ಹೇಳಿದರು.
ಶರಣ ಭಾರತ ಸಂಶೋಧನಾ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷ ಬಾಬಾಸಾಹೇಬ ಗಡ್ಡೆ ಮಾತನಾಡಿ, ‘ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಜಂಟಿಯಾಗಿ ಬಸವ ತತ್ವಶಾಸ್ತ್ರ, ಇತಿಹಾಸ, ಜಾನಪದ ಸಂಸ್ಕೃತಿ ಮತ್ತು ಸಾಮಾಜಿಕ-ಆರ್ಥಿಕ ಕಾಯಕ ಮಾದರಿಗಳ ಕುರಿತು ಸಂಶೋಧನೆ ಮತ್ತು ಪ್ರಕಟಣೆಗಳು ಮತ್ತಿತರ ಕಾರ್ಯ ಮಾಡಲಿವೆ’ ಎಂದು ಹೇಳಿದರು.
ಇದಕ್ಕೂ ಮುನ್ನ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮತ್ತು ಬಾಬಾಸಾಹೇಬ ಗಡ್ಡೆ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಕಾರ್ಯಕ್ರಮದ ಸಂಯೋಜಕ ಜಗದೀಶ ಬಿರೇದಾರ ಸ್ವಾಗತಿಸಿದರು. ನಿತಿನ್ ಬಿ. ನಿರೂಪಿಸಿ, ವಂದಿಸಿದರು.
ಪ್ರೊ. ವಿಕ್ರಮ ವಿಸಾಜಿ, ಪ್ರೊ. ಪಾಂಡುರಂಗ ವಿ.ಪತ್ತಿ, ಬಸವ ಪೀಠದ ಸಂಯೋಜಕ ಪ್ರೊ. ಗಣಪತಿ ಸಿನ್ನೂರ, ಮಹೇಂದ್ರ, ಗೌತಮ ಹಾಗೂ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.