ADVERTISEMENT

ಆಳಂದ: ವಿದ್ಯಾರ್ಥಿನಿ ಆತ್ಮಹತ್ಯೆ ತನಿಖೆಗೆ ಆಗ್ರಹ

ಕಡಗಂಚಿ ವಿವಿ ಮುಂದೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:44 IST
Last Updated 6 ಆಗಸ್ಟ್ 2025, 5:44 IST
ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಮಂಗಳವಾರ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ಜರುಗಿತು 
ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಮಂಗಳವಾರ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ಜರುಗಿತು    

ಆಳಂದ: ತಾಲ್ಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಮಂಗಳವಾರ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌, ಭಾರತ ವಿದ್ಯಾರ್ಥಿ ಫೆಡರೇಷನ್‌ ಹಾಗೂ ದಲಿತ ಹಕ್ಕುಗಳ ಸಮಿತಿ ಸದಸ್ಯರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿಶ್ವವಿದ್ಯಾಲಯದ ಮುಖ್ಯಗೇಟ್‌ ಮುಂದೆ ಮೂರು ಗಂಟೆಗಳ ಕಾಲ ಜಿಟಿಜಿಟಿ ಮಳೆಯ ಮಧ್ಯದಲ್ಲೂ ಪ್ರತಿಭಟನೆ ನಡೆಸಿ, ವಿವಿ ಕುಲಪತಿ ಬಟ್ಟು ಸತ್ಯನಾರಾಯಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ‘ಕೇಂದ್ರೀಯ ವಿವಿಯನ್ನು ಆರ್‌ಎಸ್‌ಎಸ್‌ ಕೇಂದ್ರವಾಗಿ ರೂಪಿಸಲು ಕುಲಪತಿ ಹಾಗೂ ಕೆಲವರು ಹೊರಟಿದ್ದಾರೆ. ಕೋಮುವಾದಿ ಮನಸ್ಥಿತಿಯಿಂದ ವಿಶ್ವವಿದ್ಯಾಲಯವನ್ನು ಮುಕ್ತಗೊಳಿಸಬೇಕು. ಒಡಿಶಾ ಮೂಲದ ವಿದ್ಯಾರ್ಥಿನಿಯ ಆತ್ಮಹತ್ಯೆಯು ಸಂಶಯಾಸ್ಪದವಾಗಿದ್ದು, ಸೂಕ್ತ ತನಿಖೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಮಾತನಾಡಿ, ‘ಕೇಂದ್ರೀಯ ವಿವಿಯಲ್ಲಿ ನಿರಂತರವಾಗಿ ವಿದ್ಯಾರ್ಥಿಗಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕೋಮುವಾದಿ ಮನಸ್ಥಿತಿಯಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ತಾರತಮ್ಯ ಭಾವನೆ ಮೂಡಿಸುವುದರಿಂದ ಆತ್ಮಹತ್ಯೆಗಳು ಮತ್ತು ಮಾನಸಿಕ ಕಿರುಕುಳದ ಘಟನೆಗಳು ಮುಂದುವರಿದಿವೆ. ಹೆಣ್ಣುಮಕ್ಕಳ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಮಹಿಳಾ ಆಪ್ತ ಸಮಾಲೋಚಕರ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಲವಿತ್ರಾ ವಸ್ತ್ರದ, ಹೋರಾಟಗಾರರಾದ ಮೌಲಾ ಮುಲ್ಲಾ, ಪದ್ಮನಿ ಕಿರಣಗಿ, ಮಾರುತಿ ಘೋಖಲೆ, ಪಾಂಡುರಂಗ ಮಾವಿನಕರ್‌, ಮಹೇಶ ರಾಠೋಡ ಮಾತನಾಡಿ, ‘ವಿದ್ಯಾರ್ಥಿನಿ ಆತ್ಮಹತ್ಯೆಯನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ. ಉನ್ನತ ಅಧಿಕಾರಿಗಳಿಂದ ಘಟನೆಯ ತನಿಖೆ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜನವಾದಿ ಸಂಘಟನೆ ಬೀದರ್‌ ಅಧ್ಯಕ್ಷೆ ವಿಜಯಲಕ್ಷ್ಮಿ ಗಡ್ಡೆ, ಪ್ರಭು ಖಾನಾಪುರೆ, ಸುಜಾತ ವೈ, ಚಂದಮ್ಮ ಗೋಳಾ, ಜನಾರ್ದನ, ಸಲ್ಮಾನ್‌ ದೇವಂತಗಿ, ಪ್ರಮೋದ ಪಂಚಾಳ, ಭೀಮಾಶಂಕರ ಮಾಡಿಯಾಳ, ಸರ್ವೇಶ ಮಾವಿನಕರ, ವಿಲಾಸ ಚಿಚಕೋಟೆ, ಶೀಲಾ ರೆಡ್ಡಿ, ಮೀನಾಕ್ಷಿ ಧನ್ನಿ, ಮಲ್ಲಮ್ಮ ಪಾಲ್ಗೊಂಡಿದ್ದರು.

ಡಿವೈಎಸ್‌ಪಿ ತಮ್ಮರಾಯ, ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಇಂದುಮತಿ, ವಾತ್ಸಲ್ಯ, ಸಿದ್ದರಾಮ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು.

ಪ್ರತಿಭಟನಕಾರರು ಕುಲಸಚಿವ ಆರ್‌.ಆರ್‌.ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು 
ವಿವಿ ಕುಲಪತಿ ವಿರುದ್ಧ ಘೋಷಣೆ ವಿವಿಗೆ ಪೊಲೀಸ್‌ ಬಿಗಿ ಬಂದೋಬಸ್ತ್‌ | ವಿವಿ ಗೇಟ್‌ ಬಳಿಯೇ ಹೋರಾಟಗಾರರನ್ನು ತಡೆದ ಪೊಲೀಸರು
ವಿದ್ಯಾರ್ಥಿನಿ ಜಯಶ್ರೀ ಆತ್ಮಹತ್ಯೆ ಪ್ರಕರಣದ ತನಿಖೆಗೆ ವಿಶ್ವವಿದ್ಯಾಲಯವು ಮುಕ್ತ ಮನಸ್ಸಿನಿಂದ ಸಹಕಾರ ನೀಡಲಿದೆ. ವಿದ್ಯಾರ್ಥಿನಿ ಸಾವು ನಮಗೂ ನೋವು ತಂದಿದೆ
ಆರ್‌.ಆರ್‌.ಬಿರಾದಾರ ಕುಲಸಚಿವ ಸಿಯುಕೆ
ವಿಶ್ವವಿದ್ಯಾಲಯದಲ್ಲಿ ಹೆಚ್ಚುತ್ತಿರುವ ಕೋಮುವಾದ ಚಟುವಟಿಕೆ ತಡೆಗಟ್ಟಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಭದ್ರತೆ ಕಲ್ಪಿಸುವ ಮೂಲಕ ಸೌಹಾರ್ದ ವಾತಾವರಣ ನಿರ್ಮಿಸಬೇಕು
ಕೆ.ನೀಲಾ ಹೋರಾಟಗಾರ್ತಿ

ಒಳನುಗ್ಗಲು ಯತ್ನ; ಮಾತಿನ ಚಕಮಕಿ

ಪ್ರತಿಭಟನಕಾರರು ಎರಡು ಗಂಟೆ ಕಾಲ ಧರಣಿ ಮುಂದುವರಿಸಿದರೂ ಕುಲಪತಿ ಕುಲಸಚಿವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲು ಹಿಂದೇಟು ಹಾಕಿದರು. ಇದು ಪ್ರತಿಭಟನಕಾರರನ್ನು ಕೆರಳಿಸಿತು. ಧರಣಿನಿರತರು ವಿಶ್ವವಿದ್ಯಾಲಯದ ಗೇಟ್‌ ಮೂಲಕ ಆವರಣದೊಳಗೆ ನುಗ್ಗಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಮತ್ತೆ ಪೊಲೀಸ್‌ ಅಧಿಕಾರಿಗಳ ಮಧ್ಯಸ್ಥಿಕೆ ನಡುವೆ ಕುಲಸಚಿವ ಆರ್‌.ಆರ್‌.ಬಿರಾದಾರ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.