ADVERTISEMENT

ಕೇಶವ ಕೃಪಾ ಆಗಿ ಬದಲಾದ ಸಿಯುಕೆ: ಅರ್ಜುನ ಭದ್ರೆ

ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಅರ್ಜುನ ಭದ್ರೆ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 15:59 IST
Last Updated 15 ಸೆಪ್ಟೆಂಬರ್ 2022, 15:59 IST
ಅರ್ಜುನ ಭದ್ರೆ
ಅರ್ಜುನ ಭದ್ರೆ   

ಕಲಬುರಗಿ: ‘ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌ ಚಟುವಟಿಕೆಗಳು ಹೆಚ್ಚಾಗಿದ್ದು, ಸಿಯುಕೆ ಕ್ಯಾಂಪಸ್ ಕೇಶವ ಕೃಪಾ ಆಗಿ ಬದಲಾಗಿದೆ. ಶರಣರ ನಾಡಿನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಕೋಮು ವಿಷಬೀಜ ಬಿತ್ತುವ ಯತ್ನಗಳು ನಡೆಯುತ್ತಿರುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಟೀಕಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿನ ಅವ್ಯವಹಾರ, ದಲಿತ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಶಿಷ್ಯವೇತನ, ಪರಿಶಿಷ್ಟ ವಿದ್ಯಾರ್ಥಿಗಳಿಗೂ ಸಾಮಾನ್ಯ ವರ್ಗದವರಿಗಷ್ಟೇ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಬಸವರಾಜ ಡೋಣೂರ ಅವರು ಉದ್ದೇಶಪೂರ್ವಕವಾಗಿ ಮುಖ್ಯ ದ್ವಾರದ ಕೀಲಿ ಹಾಕಿಸಿದರು. ಕುಲಪತಿಗಳು ಮನವಿ ಸ್ವೀಕರಿಸುವ ಕನಿಷ್ಠ ಸೌಜನ್ಯವನ್ನೂ ತೋರಿಸಲಿಲ್ಲ. ಬದಲಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 22 ಹೋರಾಟಗಾರರ ಮೇಲೆ ಬೆದರಿಕೆಯಂತಹ ಗಂಭೀರ ಸ್ವರೂಪದ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಪ್ರತಿಭಟಿಸುವ ಮೂಲಕ ಅಕ್ರಮಗಳನ್ನು ಪ್ರಶ್ನಿಸುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎರಡು ವರ್ಷಗಳು ಕಳೆದರೂ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆಗೊಳಿಸಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆಯಿಂದ ನಿರ್ವಹಿಸುವ ವಸತಿ ನಿಲಯಗಳಿಗೆ ಎಷ್ಟೇ ಜನ ಪರಿಶಿಷ್ಟ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ಎಲ್ಲರಿಗೂ ಪ್ರವೇಶಾವಕಾಶ ಕೊಡಬೇಕು ಎಂಬ ನಿಯಮವಿದೆ. ಆದರೆ, ಇತ್ತೀಚೆಗೆ ಅದು ಪಾಲನೆಯಾಗುತ್ತಿಲ್ಲ. ಇದರಿಂದಾಗಿ ದುಬಾರಿ ಹಣ ಖರ್ಚು ಮಾಡಿ ಬಾಡಿಗೆ ಕೊಠಡಿ ಹಿಡಿಯಬೇಕಾದ ಕಾರಣಕ್ಕೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಮೇಲೆ ದೌರ್ಜನ್ಯವೆಸಗಿದ್ದಕ್ಕೆ ನೀಡಬೇಕಿದ್ದ ಪರಿಹಾರ, ಸುಮಾರು ₹ 25 ಲಕ್ಷ ಮಂಜೂರಾಗದೇ ಉಳಿದಿದೆ. ದೌರ್ಜನ್ಯಗಲ್ಲಿ ಮೃತಪಟ್ಟ 21 ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡುವುದೂ ಬಾಕಿ ಇದೆ’ ಎಂದರು.

ADVERTISEMENT

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಜಿಲ್ಲಾ ಖಜಾಂಚಿ ಸೂರ್ಯಕಾಂತ ಆಜಾದ‍ಪೂರ, ನಗರ ಸಂಚಾಲಕ ಶಿವಕುಮಾರ ಕೊರಳ್ಳಿ, ತಾಲ್ಲೂಕು ಸಂಚಾಲಕ ಕಪಿಲ ಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.