
ಕಲಬುರಗಿ: ನಗರದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಬಿ.ಆರ್.ಛಾಯಾ ಅವರು ಶುಕ್ರವಾರ ಚಲನಚಿತ್ರ, ಜನಪದ, ಭಾವಗೀತೆ, ಶಿಶುಗೀತೆಗಳ ಗಾಯನದ ಮೂಲಕ ಸಂಗೀತ ಸುಧೆ ಹರಿಸಿದರು. ಛಾಯಾ ಅವರ ಕಂಚಿನ ಕಂಠದ ಗಾಯನ ಮೋಡಿಗೆ ನೆರೆದಿದ್ದ ನೂರಾರು ಮಂದಿ ತಲೆದೂಗಿದರು. ಆಗಾಗ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ಶುಕ್ರವಾರ ಆರಂಭವಾದ ನೂತನ ವಿದ್ಯಾಲಯ ಸಂಸ್ಥೆಯ 30ನೇ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದ ಅವರು ‘ನನಗೆ ಮಾತು ಬರಲ್ಲ’ ಎನ್ನುತ್ತ ಗಾಯನದತ್ತ ಹೊರಳಿದರು.
‘ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವ ನೀನಾಗು...’ ಎಂದು ಹಾಡಿದ ಛಾಯಾ ಅವರು ನೆರೆದಿದ್ದ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೆಪಿಸಿದರು. ಬಳಿಕ ‘ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ’ ಗೀತೆಗೆ ಧನಿಯಾಗಿ ಹದಿಹರೆಯದ ಮನಸುಗಳನ್ನು ಗೆದ್ದರು.
‘ನಿನ್ನಂಥ ಅಪ್ಪ ಇಲ್ಲ... ಒಂದೊಂದು ಮಾತೂ ಬೆಲ್ಲ’ ಹಾಡುವ ಮೂಲಕ ಅಪ್ಪ–ಮಗಳ ಬಾಂಧವ್ಯ ಕಣ್ಮುಂದೆ ತಂದಿಟ್ಟರು. ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು...’ ಎಂದು ರಾಘವೇಂದ್ರನನ್ನು ಭಜಿಸಿದರು. ‘ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸ್ಸು’ ಎಂದು ಛಾಯಾ ತಮ್ಮ ಗಾಯನದ ಮೂಲಕವೇ ಯುವಜನರನ್ನು ಎಚ್ಚರಿಸಿದರು.
ಇದರ ಮಧ್ಯದಲ್ಲಿ ‘ಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆ, ಉಂಡೆ ಉಂಡೆ ಬೆಲ್ಲ ಡಬ್ಬದಲ್ಲಿದೆ’, ‘ಬಿಟ್ಟುಹೊಂಟಿ ನನ್ನ ಹಳ್ಳಿ’, ‘ಉಡಿಯಕ್ಕಿ ಹಾಕತಾರ, ಊರು ಬಿಟ್ಟು ಕಳಿಸತಾರಾ...’ ‘ಸೆಟಗೊಂಡ್ಯೇನ್ ಗೆಳತಿ ನನ್ನ ಮಾರಿ ನೋಡಾಕ ಬರವಲ್ಲಿ...’ ಹಾಡುಗಳನ್ನು ಚುಟುಕಾಗಿ ಹಾಡಿ ನೆರೆದಿದ್ದ ಜನಸ್ತೋಮದ ಎಲ್ಲ ಸ್ತರ ಶ್ರೋತೃಗಳನ್ನು ತಲುಪಲು ಯತ್ನಿಸಿದರು.
ಹಿರಿಯರ ಕೋರಿಕೆಯಂತೆ ಹಿಂದಿ ಚಿತ್ರ ‘ಮೇರೆ ಸನಮ್’ನ ‘ಜಾಯಿಯೇ ಆಪ್ ಕಹಾಂ ಜಾಯೇಂಗೆ ಯೇ ನಜರ್ ಫಿರ್ ಲೌಟಕೇ ಆಯೇಗಿ’ ಗೀತೆ ಹಾಡುವುದರೊಂದಿಗೆ ಗಾಯನ ಮುಕ್ತಾಯಗೊಳಿಸಿದರು.
ಬಿ.ಆರ್.ಛಾಯಾ ಅವರ ಪತಿ, ನೂತನ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಪದ್ಮಪಾಣಿ ಮಾತನಾಡಿ, ‘ನಾನು 6, 7ನೇ ಕ್ಲಾಸ್ ಈ ಶಾಲೆಯಲ್ಲಿ ಕಲಿತಿರುವೆ. ಈ ಶಾಲೆಯಲ್ಲಿ ಮಕ್ಕಳಿಗೆ ಸ್ಪೂರ್ತಿಯ ಮಾತುಗಳೇ ಬೇಕಿಲ್ಲ. ಬರೀ ಗುರುಗಳು ಹೇಳುವುದನ್ನು ಶ್ರದ್ಧೆಯಿಂದ ಕಲಿತರೆ ಸಾಕು, ಭವಿಷ್ಯ ಉಜ್ವಲ ನಿಮಗಾಗಿ ಕಾದಿದೆ’ ಎಂದರು.
ಸಾಂಸ್ಕೃತಿಕ ಉತ್ಸವ ಸಮಿತಿಯ ಉಪಾಧ್ಯಕ್ಷ ಆನಂದ ಆರ್.ಪಪ್ಪು ಸ್ವಾಗತಿಸಿದರು. ಎನ್.ವಿ.ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಎನ್.ವಿ. ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ಬಿ.ಜಾಜಿ, ಪ್ರಮುಖರಾದ ರವೀಂದ್ರ ಟೆಂಗಳಿ, ಸುಧಾ ಕುಲಕರ್ಣಿ ಕರಲಗಿಕರ, ಎಸ್.ಎಸ್.ಸಿದ್ಧಾಪೂರಕರ, ಬಿ.ಜಿ.ದೇಶಪಾಂಡೆ, ವಿಕ್ರಮ ಚಂಡ್ರಿಕಿ, ಉದಯ ಹೊನಗುಂಟಿಕರ್, ಮೀನಾ ಪತಕಿ, ಸುಹಾಸ ಖಣಗೆ, ಭಾರತ್ ಕುಲಕರ್ಣಿ ಸೇರಿದಂತೆ ಹಲವರು ವೇದಿಕೆಯಲ್ಲಿ ಇದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಬಳಿಕ ವಿವಿಧ ವರ್ಗಗಳ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
‘ಓದು ಹವ್ಯಾಸ ಎರಡೂ ಮುಖ್ಯ’
‘ಬದುಕಿನಲ್ಲಿ ಓದು ಹಾಗೂ ಹವ್ಯಾಸ ಎರಡೂ ಇರಬೇಕು. ಶಿಕ್ಷಣದೊಂದಿಗೆ ಸಂಗೀತ ನೃತ್ಯ ಭಾಷಣ ಸೇರಿದಂತೆ ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಶ್ರದ್ಧೆಯಿಂದ ಕಲಿಯಬೇಕು’ ಎಂದು ಖ್ಯಾತ ಹಿನ್ನೆಲೆ ಗಾಯಕಿ ಬಿ.ಆರ್.ಛಾಯಾ ಕಿವಿಮಾತು ಹೇಳಿದರು. ಗಾಯನದ ನಡುವೆ ವಾಕ್ಯಗಳನ್ನು ಉಲಿದ ಅವರು ‘ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಓದಿಗೆ ಒತ್ತು ನೀಡಬೇಕು. ಜೊತೆಗೆ ಹವ್ಯಾಸವೂ ಇರಲೇಬೇಕು. ಬರೀ ಓದಿನ ಬೆನ್ನತ್ತಿದರೂ ಕಷ್ಟ. ಕೇವಲ ಹವ್ಯಾಸ ಬೆನ್ನು ಹತ್ತಿದರೂ ಮುಂದಿನ ಜೀವನವೂ ಕಷ್ಟವಾಗುತ್ತದೆ’ ಎಂದರು.
ಭಾರತೀಯ ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ. ಸಾಂಸ್ಕೃತಿಕ ಉತ್ಸವಕ್ಕೆ ಈಗ 30ನೇ ವಸಂತ. ಅದಕ್ಕೂ ಮುನ್ನ ಸರಸ್ವತಿ ಉತ್ಸವ ಆಚರಿಸಲಾಗುತ್ತಿತ್ತು. ಅದನ್ನು ಮತ್ತೆ ಆರಂಭಿಸಲಾಗುವುದು–ಗೌತಮ ಆರ್. ಜಹಾಗೀರದಾರ, ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.