ADVERTISEMENT

ಸೈಕಲ್ ಪಥ ನಿರ್ಮಾಣಕ್ಕೆ ಚಾಲನೆ

2023ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 3:59 IST
Last Updated 2 ಜನವರಿ 2023, 3:59 IST
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಸೈಕಲ್ ಪಥ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಅವಿನಾಶ್ ಕುಲಕರ್ಣಿ, ಮಲ್ಲಿಕಾರ್ಜುನ ಉದನೂರ, ಈರಣ್ಣ ಶೆಟಕಾರ, ಆರ್.ಪಿ. ಜಾಧವ್ ಇದ್ದರು
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಸೈಕಲ್ ಪಥ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಅವಿನಾಶ್ ಕುಲಕರ್ಣಿ, ಮಲ್ಲಿಕಾರ್ಜುನ ಉದನೂರ, ಈರಣ್ಣ ಶೆಟಕಾರ, ಆರ್.ಪಿ. ಜಾಧವ್ ಇದ್ದರು   

ಕಲಬುರಗಿ: ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ₹ 19 ಕೋಟಿ ಆರ್ಥಿಕ ನೆರವಿನಲ್ಲಿ ನಗರದ ಹೀರಾಪುರ ಕ್ರಾಸ್‌ನಿಂದ ಸರ್ದಾರ್ ವಲ್ಲಭಭಾಯಿ ಪಟೇಲ್, ಅನ್ನಪೂರ್ಣ ಕ್ರಾಸ್‌ ಮಾರ್ಗವಾಗಿ ಖರ್ಗೆ ಪೆಟ್ರೋಲ್ ಪಂಪ್‌ವರೆಗಿನ ಸೈಕಲ್ ಪಥ
ಹಾಗೂ ಮಿಶ್ರ ಸಾರಿಗೆ ವ್ಯವಸ್ಥೆಯ ಬಿಆರ್‌ಟಿಸ್ ಕಾಮಗಾರಿಗೆ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಪಾಟೀಲ
ರೇವೂರ ಎಸ್‌ವಿಪಿ ವೃತ್ತದಲ್ಲಿ ಚಾಲನೆ ನೀಡಿದರು.

ನಗರ ಭೂಸಾರಿಗೆಯ ನಿರ್ದೇಶನಾಲಯದ ಆರ್ಥಿಕ ನೆರವಿನಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬರುವ ಅಕ್ಟೋಬರ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿದೆ.

ಕಾಮಗಾರಿಗೆ ಚಾಲನೆ ನೀಡಿದ ಮಾತನಾಡಿದ ದತ್ತಾತ್ರೇಯ ಪಾಟೀಲ ರೇವೂರ, ‘ರಾಜ್ಯ ಸರ್ಕಾರವು ಸಮೂಹ ಸಾರಿಗೆಯನ್ನು ಬಲಪಡಿಸುವ ಹಾಗೂ ಪರಿಸರ ಸ್ನೇಹಿ ಸೈಕಲ್ ಸವಾರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸೈಕಲ್ ಪಥ ಹಾಗೂ ಬಿಆರ್‌ಟಿಸ್ (ಕ್ಷಿಪ್ರ ಕಾರ್ಯಾಚರಣೆ ಸಾರಿಗೆ ವ್ಯವಸ್ಥೆ)ನ್ನು ನಗರದಲ್ಲಿ ಪರಿಚಯಿಸುತ್ತಿದೆ. ರಾಜ್ಯದ ಆಯ್ದ ಐದು ನಗರಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಅದರಲ್ಲಿ ಕಲಬುರಗಿಯೂ ಒಂದಾಗಿರುವುದು ಹೆಮ್ಮೆಯ ಸಂಗತಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಐದು ಪ್ರಮುಖ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ. ₹ 33 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿ ಮಾರ್ಕೆಟ್ ಕಟ್ಟಡ ಶೀಘ್ರ ಲೋಕಾರ್ಪಣೆಯಾಗಲಿದೆ’ ಎಂದರು.

ADVERTISEMENT

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಮಹಾನಗರ ಪಾಲಿಕೆ ಸದಸ್ಯ , ಮಲ್ಲಿಕಾರ್ಜುನ ಉದನೂರ, ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ್, ವಲಯ 1ರ ಆಯುಕ್ತ ಮದನಿಕಾಂತ್ ಶೃಂಗೇರಿ,
ಕಲಬುರಗಿ ಸೈಕ್ಲಿಸ್ಟ್ ಕ್ಲಬ್ ಅಧ್ಯಕ್ಷ ಈರಣ್ಣಾ ಶೆಟಕಾರ, ವೈದ್ಯರಾದ ಡಾ. ಗಿರೀಶ್ ನೂಲಾ, ಡಾ. ಸಚಿನ್ ಜೀವಣಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.