ADVERTISEMENT

ವಲಸೆಯಿಂದ ಮರಳಿದವರಿಗೆ ಹೈನುಗಾರಿಕೆ ತರಬೇತಿ

ಕಲಬುರ್ಗಿ– ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:26 IST
Last Updated 23 ಮೇ 2020, 13:26 IST
ರಾಮಚಂದ್ರಪ್ಪ
ರಾಮಚಂದ್ರಪ್ಪ   

ಕಲಬುರ್ಗಿ: ‘ವಲಸೆಯಿಂದ ಮರಳಿ ಬಂದಿರುವ ಕಾರ್ಮಿಕರು ಹಾಗೂ ರೈತರಿಗೆ ಹೈನುಗಾರಿಕೆ ಬಗ್ಗೆ ಉಚಿತ ತರಬೇತಿ ನೀಡಲಾಗುವುದು. ದುಡಿಮೆ ಅರಸಿ ಮತ್ತೆ ವಲಸೆ ಹೋಗದಂತೆ, ತವರೂರಲ್ಲೇ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದು’ ಎಂದು ಕಲಬುರ್ಗಿ– ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಲ್ಯಾಣರಾವ ಪಾಟೀಲ ತಿಳಿಸಿದರು.

‘ಕಲಬುರ್ಗಿ– ಬೀದರ್‌– ಯಾದಗಿರಿ ಹಾಲು ಒಕ್ಕೂಟಕ್ಕೆ ಒಳಪಟ್ಟ ಈ ಮೂರೂ ಜಿಲ್ಲೆಗಳಲ್ಲಿ ಈವರೆಗೆ ಸುಮಾರು 2.30 ಲಕ್ಷಕ್ಕೂ ಹೆಚ್ಚು ವಲಸಿಗರು ಮರಳಿದ್ದಾರೆ. ಇದರಲ್ಲಿ ಹಲವರಿಗೆ ಭೂಮಿ ಇಲ್ಲ, ಭೂಮಿ ಇದ್ದರೂ ದುಡಿಯುವ ಪರಿಸ್ಥಿತಿ ಇಲ್ಲ. ಅಂಥವರು ಕೆಲಸಕ್ಕೆ, ಊಟಕ್ಕೆ ಇನ್ನೊಬ್ಬರ ಬಳಿ ಕೈಚಾಚುವ ಬದಲು ಹೈನುಗಾರಿಕೆ ಮಾಡಬಹುದು. ಸಾಧ್ಯವಾದವು ಹೊಸ ಸಹಕಾರ ಸಂಘಗಳನ್ನೂ ಕಟ್ಟಿಕೊಳ್ಳಬಹುದು. ತರಬೇತಿ ಪ್ರಯೋಜನವನ್ನು ಯಾರೆಲ್ಲರೂ ಪಡೆದುಕೊಳ್ಳಬಹುದು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೊರೊನಾ ವೈರಾಣು ಉಪಟಳದಿಂದ ಎಲ್ಲ ಉದ್ಯಮಗಳೂ ನೆಲ ಕಚ್ಚಿವೆ. ಕೆಲಸವಿಲ್ಲದೇ ಅಪಾರ ಜನ ಹಳ್ಳಿಗಳಿಗೆ ಮರಳಿದ್ದಾರೆ. ಹೈನುಗಾರಿಕೆ ಮಾಡಲು ಇದು ಒಳ್ಳೆಯ ಸಂದರ್ಭ. ಹಾಲು ಉತ್ಪಾದನೆ ಹೆಚ್ಚುವ ಜತೆಗೆ, ಬಡವರೂ ಸ್ವಾವಲಂಬಿ ಜೀವನ ನಡೆಸಬಹುದು. ಒಕ್ಕೂಟದಿಂದ ಪ್ರತಿ ವಾರ ಹಾಲಿನ ಬಿಲ್‌ ಪಾವತಿ ಮಾಡುವುದರಿಂದ ದುಡಿಮೆಯ ಫಲಕ್ಕಾಗಿ ಕಾಯಬೇಕಾದ ಅವಶ್ಯಕತೆಯೂ ಇರುವುದಿಲ್ಲ’ ಎಂದರು.

ADVERTISEMENT

ಹಾಲು ಸಂಗ್ರಹ ಪ್ರಮಾಣ ಕಡಿಮೆ: ‘ಜಾನುವಾರು, ಮಳೆ ಪ್ರಮಾಣ ಹಾಗೂ ಭೂಮಿಯನ್ನು ತಾಳೆ ಹಾಕಿದರೆ ಕೋಲಾರ ಜಿಲ್ಲೆ ಕೂಡ ಕಲಬುರ್ಗಿ ಜಿಲ್ಲೆಗೆ ಸಮನಾಗಿದೆ. ಆದರೆ, ಅಲ್ಲಿ ಅತಿ ಹೆಚ್ಚಿನ ಪ್ರಮಾಣದ ಹಾಲು ಸಂಗ್ರಹವಾಗುತ್ತಿದೆ. ನಮ್ಮಲ್ಲಿ ಬೇಡಿಕೆ ಹೆಚ್ಚಿದ್ದು, ಹಾಲು ಸಂಗ್ರಹ ಕಡಿಮೆ ಇದೆ. ಹೀಗಾಗಿ, ವಿಜಯಪುರ, ಶಿವಮೊಗ್ಗ ಮುಂತಾದ ಕಡೆಗಳಿಂದ ಪ್ರತಿ ದಿನ ಹಾಲು ಆಮದು ಮಾಡಿಕೊಂಡು ಪೂರೈಸಲಾಗುತ್ತಿದೆ’ ಎಂದು ಹೇಳಿದರು.

‘ರಂಜಾನ್‌ ಹಬ್ಬಕ್ಕಾಗಿ ಈಗಾಗಲೇ ಸಾಕಷ್ಟು ಹಾಲನ್ನು ಸಂಗ್ರಹಿಸಿ ಇಡಲಾಗಿದೆ. ಪಕ್ಕದ ರಾಜ್ಯಗಳಿಂದ ಪೂರೈಕೆ ಆಗುವ ಖಾಸಗಿ ಕಂಪನಿಗಳ ಹಾಳಿನಲ್ಲಿ ರಾಸಾಯನಿಕ ಪ್ರಮಾಣ ಹೇರಳವಾಗಿರುವುದು ಪತ್ತೆಯಾಗಿದೆ. ಹಾಗಾಗಿ, ನಂದಿನಿ ಹಾಲನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದೂ ಅವರು ಮನವಿ ಮಾಡಿದರು.

ಲಕ್ಷ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಗುರಿ
‘ಕೃತಕ ಗರ್ಭ ಧಾರಣೆ ಮುಖಾಂತರ ತಳಿ ಅಭಿವೃದ್ಧಿ ಮಾಡಲು ಉದ್ದೇಶಿಸಿದ್ದು, ಮೂರೂ ಜಿಲ್ಲೆಗಳು ಸೇರಿ 1 ಲಕ್ಷ ಜಾನುವಾರುಗಳಿಗೆ ಕೃತಕ ಗರ್ಭ ಧಾರಣೆ ಮಾಡುವ ಗುರಿ ಹಿಂದಲಾಗಿದೆ. ನಮಲ್ಲಿ ಈಗ 4.68 ಲಕ್ಷ ಜಾನುವಾರು ಇವೆ. ಕೇವಲ 9 ಸಾವಿರ ತಳಿಗಳಿಗೆ ಮಾತ್ರ ಕೃತಕ ಗರ್ಭಧಾರಣೆ ಮಾಡಲಾಗಿದೆ. ಈ ಪ್ರಯೋಗದಿಂದ ತಳಿ ಅಭಿವೃದ್ಧಿ ಜತೆಗೆ, ಹಾಲಿನ ಪ್ರಮಾಣವೂ ಹೆಚ್ಚಲಿದೆ’ ಎಂದು ರಾಮಚಂದ್ರಪ್ಪ ತಿಳಿಸಿದರು.

‘ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್‌)ಯು ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಮುಂದಾಗಿದೆ. ಪ್ರತಿ ಕ್ವಿಂಟಲ್‌ಗೆ ₹ 1760 ದರ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಅಂಕಿ ಅಂಶ

60,100 ಲೀಟರ್‌:ಪ್ರತಿ ದಿನ ಮಾರಾಟವಾಗುವ ಹಾಲಿನ ಪ್ರಮಾಣ

45,332 ಲೀಟರ್‌: ಸ್ಥಳೀಯ ಒಕ್ಕೂಟದಿಂದ ಶೇಖರಣೆಗೊಳ್ಳುವ ಹಾಲು

20,000 ಲೀಟರ್‌:ಬೇರೆ ಜಿಲ್ಲೆಗಳಿಂದ ತರಿಸಿಕೊಳ್ಳುತ್ತಿರುವ ಹಾಲಿನ ಪ್ರಮಾಣ

7.5 ಲಕ್ಷ ಲೀಟರ್‌:ಈವರೆಗೆ ಅಸಹಾಯಕರಿಗೆ ಉಚಿತವಾಗಿ ವಿತರಿಸಿದ ಹಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.