ADVERTISEMENT

ದಲಿತ ಬಾಲಕ ಸಾವು: ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 6:00 IST
Last Updated 18 ಆಗಸ್ಟ್ 2022, 6:00 IST
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ ಮೇಣದ ಬತ್ತಿಹಿಡಿದು ಪ್ರತಿಭಟನೆ ನಡೆಸಿದ ದಲಿತ ಮಾದಿಗ ಸಮನ್ವಯ ಸಮಿತಿಯ ಮುಖಂಡರು 
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ ಮೇಣದ ಬತ್ತಿಹಿಡಿದು ಪ್ರತಿಭಟನೆ ನಡೆಸಿದ ದಲಿತ ಮಾದಿಗ ಸಮನ್ವಯ ಸಮಿತಿಯ ಮುಖಂಡರು    

ಕಲಬುರಗಿ: ರಾಜಸ್ಥಾನದಲ್ಲಿ ದಲಿತ ಬಾಲಕನ ಸಾವಿಗೆ ಕಾರಣ ಎನ್ನಲಾದ ಆರೋಪಿ ಶಿಕ್ಷಕ ಚಾಯಿಲ್ ಸಿಂಗ್‌ಗೆ ಮರಣ ದಂಡನೆ ವಿಧಿಸಬೇಕು ಎಂದು ದಲಿತ ಮಾದಿಗ ಸಮನ್ವಯ ಸಮಿತಿಯ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಬುಧವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ‘ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ 9 ವರ್ಷದ ಇಂದ್ರ ಕುಮಾರ ಮೇಘವಾಲ ಓದುತ್ತಿದ್ದ. ಶಾಲೆಯಲ್ಲಿನ ಕುಡಿಯುವ ನೀರಿನ ಮಡಿಕೆ ಮುಟ್ಟಿದ್ದಕ್ಕಾಗಿ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಆತನ ಸಾವಿಗೆ ಕಾರಣನಾದ ಶಿಕ್ಷಕನಿಗೆ ಮರಣ ದಂಡನೆ ವಿಧಿಸಬೇಕು’ ಎಂದು ಆಗ್ರಹಿಸಿದರು.

‘ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರನ್ನು ಬಾಲ್ಯದಲ್ಲಿ ಇದೇ ರೀತಿಯಾಗಿ ಅಪಮಾನಿಸಲಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಗಳಿಗೆಯಲ್ಲಿ ಪರಿಶಿಷ್ಟ ಜಾತಿಯ ಬಾಲಕನನ್ನು ಅಸ್ಪೃಶ್ಯತೆಯಡಿ ಅಮಾನುಷವಾಗಿ ಥಳಿಸಲಾಗಿದೆ. ಕುಡಿಯುವ ನೀರಿನ ಮಡಿಕೆ ಮುಟ್ಟಿದಕ್ಕೆ ಬಾಲಕನನ್ನು ಹೊಡೆದು ಕೊಲೆ ಮಾಡಿದ್ದು ಪರಿಶಿಷ್ಟ ಸಮುದಾಯಕ್ಕೆ ನೋವು ತರಿಸಿದೆ’ ಎಂದರು.

‘ಮಕ್ಕಳು ಸ್ವಾತಂತ್ರ್ಯ ಮತ್ತು ಆರೋಗ್ಯಯುತವಾಗಿ ಬದುಕುವಂತಹ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಆದರೆ, ದೇಶದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜಕೀಯ ಪಕ್ಷಗಳು ಇದನ್ನು ಸಾಕಾರಗೊಳಿಸುವಲ್ಲಿ ವಿಫಲವಾಗಿವೆ. ಎಲ್ಲರೂ ಒಗ್ಗೂಡಿ ಇಂತಹ ಘಟನೆಗಳನ್ನು ಮರುಕಳಿಸದಂತೆ ಧ್ವನಿ ಎತ್ತಬೇಕಿದೆ’ ಎಂದು ಆಗ್ರಹಿಸಿದರು.

ADVERTISEMENT

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಸಹ ಕಾರ್ಯದರ್ಶಿ ದಿಗಂಬರ ತ್ರಿಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ ಟಿ ಮೆತ್ರೆ, ಮುಖಂಡರಾದ ಶ್ರೀಮಂತ ಭಂಡಾರಿ, ಕೆಂಚಪ್ಪ ತಾರಫೈಲ, ಶಾಂತಕುಮಾರ, ಶಿವಶರಣ ನಿಂಗದಳ್ಳಿ, ಮಲ್ಲಿಕಾರ್ಜುನ ಮೊತಿ, ಪ್ರಕಾಶ ಮಾಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.